ಉದಯವಾಹಿನಿ, ಮುಂಬೈ: ಬಿಜೆಪಿ ಸೋಲಿಸಲು ಒಂದಾಗಿರುವ ಒಕ್ಕೂಟದಲ್ಲಿ ಬಿರುಕು ಮೂಡಲು ಆರಂಭವಾಗಿದೆ. ಕಾಂಗ್ರೆಸ್ ಪ್ರವಾಸಿ ಪಕ್ಷ ಎಂದು ಕರೆಯುವ ಮೂಲಕ ಶಿವಸೇನೆ ಉದ್ಧವ್ ಠಾಕ್ರೆ ಬಣ ಟೀಕಿಸಿದೆ. ಪಕ್ಷದ ವಕ್ತಾರ ಆನಂದ್ ದುಬೆ ಪ್ರತಿಕ್ರಿಯಿಸಿ, ಮುಂಬೈನಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವಿಲ್ಲ. ಇಲ್ಲಿ ಕೇವಲ ಪ್ರವಾಸಿ ಪಕ್ಷವಾಗಿದೆ. ನಾವು ಏಕಾಂಗಿಯಾಗಿ ಮುಂದೆ ನಡೆಯಲಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಒಂದು ಸ್ವತಂತ್ರ ಪಕ್ಷ. ಯಾರೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅಥವಾ ಸ್ಪರ್ಧಿಸಬಾರದು ಎಂಬುದನ್ನು ನಿರ್ಧರಿಸುವುದು ಅವರ ಹಕ್ಕು. ಬಿಹಾರದಲ್ಲಿ ಕಾಂಗ್ರೆಸ್ 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಕಳೆದ 35-40 ವರ್ಷಗಳಿಂದ ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರದಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿಲ್ಲ. ಪಶ್ಚಿಮ ಬಂಗಾಳ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿಯೂ ಸಹ ಅದು ಹಲವು ವರ್ಷಗಳಿಂದ ಅಧಿಕಾರದಿಂದ ಹೊರಗಿದೆ ಎಂದು ತಿಳಿಸಿದರು.
ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇಲ್ಲದೇ ಇದ್ದರೂ ನಾವು 2019 ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ನೀಡಿದೆವು. ಅಧಿಕಾರ ನೀಡಿದ ಬಳಿಕ ಕಾಂಗ್ರೆಸ್ ನಾಯಕರು ದುರಹಂಕಾರಿಗಳಾಗಿದ್ದಾರೆ. ಮುಂಬೈನಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವಿಲ್ಲ. ಇಲ್ಲಿ ಕೇವಲ ಅದು ಪ್ರವಾಸಿ ಪಕ್ಷವಾಗಿದೆ ಎಂದು ಟೀಕಿಸಿದರು.
