ಉದಯವಾಹಿನಿ, ಭೋಪಾಲ್ : ಮದುವೆ ಎರಡು ಕುಟುಂಬವನ್ನು ಒಂದುಗೂಡಿಸುವ ಕಾರ್ಯಕ್ರಮ. ಆದರೆ, ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ಈ ಮದುವೆ ರಾಜ್ಯವನ್ನೇ ಒಂದೆಡೆಗೆ ಕೂಡಿಸಿದಂತಿದೆ. ಇಲ್ಲಿನ ರೈಸೆನ್​​ನಲ್ಲಿ ನಡೆದ ವಿವಾಹ ಆರತಕ್ಷತೆಯು, ತೆರೆದ ಮೈದಾನದಲ್ಲಿ ನಡೆಯುವ ದಸರಾ ಉತ್ಸವದಂತೆ ಭಾಸವಾಗಿದ್ದು ಸುಳ್ಳಲ್ಲ. ಇಂತಹ ವೈಭೋಗದ ವಿವಾಹವು ಸಾಂಚಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಪ್ರಭು ರಾಮ್ ಚೌಧರಿ ಅವರ ಹಿರಿಯ ಪುತ್ರ ಪರ್ವ್ ಚೌಧರಿ ಅವರದ್ದಾಗಿದೆ. 8 ಎಕರೆ ವಿಸ್ತೀರ್ಣದಲ್ಲಿ ಹಾಕಿದ ಬೃಹತ್​ ಟೆಂಟ್​ ಮಿನಿ ಟೌನ್​ಶಿಪ್​ ಆಗಿತ್ತು. ಆರತಕ್ಷತೆ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಅಧಿಕ ಅತಿಥಿಗಳು ಆಗಮಿಸಿದ್ದರು ಎಂಬುದು ಅಚ್ಚರಿಯ ಸಂಗತಿ. ಭೋಪಾಲ್‌ನಲ್ಲಿ ಶಾಸಕರ ಪುತ್ರನ ಕಂಕಣಶಾಸ್ತ್ರ ಸಾಮಾನ್ಯವಾಗಿ ನಡೆದರೂ, ಆರತಕ್ಷತೆ ಕಾರ್ಯಕ್ರಮ ಇಡೀ ರಾಜ್ಯವೇ ಕಣ್ಣರಳಿಸಿ ನೋಡುವಂತೆ ನಡೆದಿದೆ. ಶಾಸಕರು ಮತ್ತು ಅವರ ಕುಟುಂಬಕ್ಕೆ ತಿಳಿದ ಪ್ರತಿಯೊಬ್ಬರಿಗೂ ಆಹ್ವಾನ ನೀಡಲಾಗಿದೆ.

ವಿವಿಐಪಿಗಳಿಗೆ ಕೆಂಪುಹಾಸಿನ ಸ್ವಾಗತ: 8 ಎಕರೆಯಷ್ಟು ಸಾರ್ವಜನಿಕ ಜಾಗವನ್ನು ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲಾಗಿದೆ. ಸುತ್ತಲೂ ಬ್ಯಾರಿಕೇಡ್ ಭದ್ರತೆ ನೀಡಲಾಗಿದೆ. ವಿವಿಐಪಿ ಅತಿಥಿಗಳಿಗಾಗಿ ಕೆಂಪು ಹಾಸಿನ ಸ್ವಾಗತ ಕೋರಲಾಗಿದೆ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರು. ಅತಿಥಿಗಳ ಆಗಮನದಿಂದ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದು ರೈಸನ್‌ನಲ್ಲಿ ಸಂಚಾರ ದಟ್ಟಣೆಗೂ ಕಾರಣವಾಗಿ ಜನರನ್ನು ಕೆರಳಿಸಿತು. ಸರ್ಕಾರದ ವಿವಿಧ ಮಂತ್ರಿಗಳು, ಕೈಗಾರಿಕೋದ್ಯಮಿಗಳು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರಯ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪಾಕಶಾಲೆಯಲ್ಲಿ ಸುಮಾರು 1 ಸಾವಿರ ಬಾಣಸಿಗರನ್ನು ನಿಯೋಜಿಸಲಾಗಿತ್ತು. ಭಾರತೀಯ ಮತ್ತು ವಿದೇಶಿ ಸೇರಿ 25 ಕ್ಕೂ ಅಧಿಕ ಭಕ್ಷ್ಯಗಳು ಸಿದ್ಧಪಡಿಸಲಾಗಿತ್ತು. 30 ಸಾವಿರಕ್ಕೂ ಹೆಚ್ಚು ಜನರು ಊಟ ಸೇವಿಸಿದ್ದಾರೆ ಎಂದು ಅಡುಗೆಯ ಹೊಣೆ ಹೊತ್ತಿದ್ದ ಅಜಬ್ ಸಿಂಗ್ ಧಾಕಡ್ ಎಂಬವರು ತಿಳಿಸಿದ್ದಾರೆ.

 

 

 

Leave a Reply

Your email address will not be published. Required fields are marked *

error: Content is protected !!