ಉದಯವಾಹಿನಿ, ಚೆನ್ನೈ:
ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಸಿಲಿಂಡರ್ ಮಾದರಿಯ ವಸ್ತುವೊಂದು ಪತ್ತೆಯಾಗಿದ್ದು, ಇದು ಪೋಲಾರ್ ಸ್ಯಾಟ್‌ಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ರಾಕೆಟ್‌ನ ಭಾಗವೇ ಎನ್ನುವುದು ಪರಿಶೀಲಿಸಲಾಗುತ್ತಿದೆ.
ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಯೋರ್ವರು ಮಾತನಾಡಿ, ಮೊದಲು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ವಸ್ತುವಿನ ವಿಡಿಯೋವನ್ನು ನಮಗೆ ಕಳುಹಿಸಬೇಕು. ಅದರ ಮೇಲೆ ಯಾವುದಾದರೂ ಗುರುತುಗಳಿವೆಯೇ ಎಂಬುದನ್ನು ನಾವು ಪರಿಶೀಲಿಸಬೇಕು ಎಂದರು.
ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಈ ಬೃಹತ್ ಲೋಹೀಯ ವಸ್ತುವನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಇದರಿಂದ ದೂರ ಇರುವಂತೆ ಅಲ್ಲಿನ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ಈ ವಸ್ತುವು ಬಹಳ ಹಿಂದಿನ ಭಾರತದ ಪಿಎಸ್‌ಎಲ್‌ವಿ ರಾಕೆಟ್‌ನ ಭಾಗವೇ ಎಂಬ ಬಗ್ಗೆ ಬಾಹ್ಯಾಕಾಶ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಟ್ವೀಟ್ ಮಾಡಿರುವ ಆಸ್ಟ್ರೇಲಿಯನ್ ಸ್ಪೇಸ್ ಏಜೆನ್ಸಿ, ನಾವು ಸದ್ಯ ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಭಾರಿ ಗಾತ್ರದ ಲೋಹೀಯ ವಸ್ತುವಿನ ಬಗ್ಗೆ ವಿವಿಧೆಡೆ ವಿಚಾರಣೆ ನಡೆಸುತ್ತಿದ್ದೇವೆ. ಈ ವಸ್ತುವು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಬಂದಿರಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿವಿಧ ಜಾಗತಿಕ ಸಂಸ್ಥೆಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಹೇಳಿದೆ.
