ಉದಯವಾಹಿನಿ, ಗ್ವಾಲಿಯರ್(ಮಧ್ಯಪ್ರದೇಶ): ಖಜುರಾಹೊ ರೆಸಾರ್ಟ್‌ನಲ್ಲಿ ವಿಷ ಆಹಾರ ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಖಜುರಾಹೊದ ಶಂಕರ್‌ಗಢದ ನಿವಾಸಿ ದಯಾರಾಮ್ ರಾಯ್ಕ್ವಾರ್ ಗ್ವಾಲಿಯರ್‌ನಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾದರು ಎಂದು ಅಧಿಕಾರಿಗಳು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.ಡಿಸೆಂಬರ್ 8 ರಂದು ಆಲೂಗಡ್ಡೆ-ಎಲೆಕೋಸು ಕರಿ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಖಜುರಾಹೊದ ಹೋಟೆಲ್ ಮತ್ತು ರೆಸಾರ್ಟ್‌ನ ಒಂಬತ್ತು ಉದ್ಯೋಗಿಗಳಲ್ಲಿ ಇವರು ಒಬ್ಬರು. ವಿಧಿವಿಜ್ಞಾನ ಪರೀಕ್ಷೆಯಿಂದ ಮೃತದೇಹಗಳಲ್ಲಿ ಫಾಸ್ಫೇಟ್ ಸಂಯುಕ್ತ ಪತ್ತೆಯಾಗಿದೆ. ಆಹಾರದಲ್ಲಿ ಅಪಾಯಕಾರಿ ಕೀಟನಾಶಕಗಳು ಇರುವ ಸಾಧ್ಯತೆ ಹೆಚ್ಚಿದೆ. ಇನ್ನೂ ನಾಲ್ವರು ಉದ್ಯೋಗಿಗಳು ಆಸ್ಪತ್ರೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಬಿಹಾರಿ (50), ರಾಮಸ್ವರೂಪ್ (47), ರೋಶ್ನಿ (30), ದಯಾರಾಮ್ ರಾಯ್ಕ್ವಾರ್ (70), ರವಿ ಕೊಂಡರ್ (ವಯಸ್ಸು ತಿಳಿದಿಲ್ಲ), ಹಾರ್ದಿಕ್ (20), ಪ್ರಗಿಲಾಲ್ ಕುಶ್ವಾಹ (33), ಗಿರ್ಜಾ ರಜಕ್ (35), ಮತ್ತು ಪ್ರಿಯಗಿ ಕುಶ್ವಾಹ (50) ಅಸ್ವಸ್ಥಗೊಂಡಿದ್ದ ಉದ್ಯೋಗಿಗಳು ಎಂದು ಗುರುತಿಸಲಾಗಿದೆ. ಪ್ರಿಯಗಿ, ರಾಮಸ್ವರೂಪ್, ಗಿರ್ಜಾ ಮತ್ತು ಹಾರ್ದಿಕ್ ಮೊದಲು ಮೃತಪಟ್ಟಿದ್ದರೆ, ಮೂರು ವಾರಗಳ ನಂತರ ರೈಕ್ವಾರ್ ಸಾವನ್ನಪ್ಪಿದ್ದರು.ಡಿಸೆಂಬರ್ 8 ರಂದು ಆಸ್ಪತ್ರೆಗೆ ರವಾಸಿದ ಸ್ವಲ್ಪ ಸಮಯ ನಂತರ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದರು. ಡಿಸೆಂಬರ್ 14 ರಂದು ನಾಲ್ಕನೇ ಸಾವಾಗಿತ್ತು ಮತ್ತು ಈಗ ಡಿಸೆಂಬರ್ 23 ರಂದು ಐದನೇ ಸಾವಾಗಿದೆ. ವಾಂತಿ ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದ ಒಂಬತ್ತು ಉದ್ಯೋಗಿಗಳನ್ನು ಛತ್ತರ್‌ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಗ್ವಾಲಿಯರ್‌ಗೆ ರವಾನಿಸಲಾಯಿತು.
ಛತ್ತರ್‌ಪುರದ ಎಎಸ್‌ಪಿ ಆದಿತ್ಯ ಪಟ್ಲೆ ಪ್ರತಿಕ್ರಿಯಿಸಿ, “ಖಜುರಾಹೊದ ಗೌತಮ್ ಹೋಟೆಲ್ ಮತ್ತು ರೆಸಾರ್ಟ್‌ಗಳಲ್ಲಿ ವಿಷ ಆಹಾರ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದೆ. ಗ್ವಾಲಿಯರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಯ್ಕ್ವಾರ್ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ನಾಲ್ವರು ಉದ್ಯೋಗಿಗಳು ಮೃತಪಟ್ಟಿದ್ದರು. ಘಟನೆಯ ನಂತರ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಈ ಸಂಬಂಧ ತನಿಖೆಗೆ ಸೂಚಿಸಿದೆ. ಎಸ್‌ಐಟಿ ತಂಡವೂ ತನಿಖೆ ನಡೆಸುತ್ತಿದೆ ಮತ್ತು ವಿಧಿವಿಜ್ಞಾನ ಪರೀಕ್ಷೆಗಳು ಮೃತದೇಹದಲ್ಲಿ ಕೀಟನಾಶಕದ ಅಂಶ ಇರುವುದನ್ನು ದೃಢಪಡಿಸಿವೆ” ಎಂದು ತಿಳಿಸಿದರು.
