ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ಸಂಸದ ತಮ್ಮ ದೇಶದ ನಾಯಕತ್ವದ ಬೂಟಾಟಿಕೆಯನ್ನು ಟೀಕಿಸಿದ್ದಾರೆ. ಕಾಬೂಲ್ ವಿರುದ್ಧ ಪಾಕಿಸ್ತಾನದ ಮಿಲಿಟರಿ ಕ್ರಮಗಳು ಮತ್ತು ಭಾರತದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದಾರೆ.
ಅಫ್ಘಾನಿಸ್ತಾನದ ನಾಗರಿಕರ ಸಾವುನೋವುಗಳಿಗೆ ಕಾರಣವಾದ ದಾಳಿಗಳಿಗೆ ಅಸಿಮ್ ಮುನೀರ್ ನೇತೃತ್ವದ ಪಾಕಿಸ್ತಾನ ಸೇನೆ ವಿರುದ್ಧ ಜಮಿಯತ್ ಉಲೇಮಾ-ಇ-ಇಸ್ಲಾಂ-ಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಕಿಡಿಕಾರಿದ್ದಾರೆ. ಇಸ್ಲಾಮಾಬಾದ್‌ನ ತರ್ಕದ ನಿಲುವನ್ನು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಗಡಿಯಾಚೆಗಿನ ದಾಳಿಗಳು ಸಮರ್ಥನೀಯವೆಂದು ಪರಿಗಣಿಸಿದರೆ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭಾರತ ಪಾಕಿಸ್ತಾನದ ಪ್ರದೇಶವನ್ನು ಪ್ರವೇಶಿಸಿದಾಗ ವಿರೋಧಿಸುವುದು ಸರಿಯಲ್ಲ ಎಂದು ರೆಹಮಾನ್ ವಾದಿಸಿದ್ದಾರೆ.ಕರಾಚಿಯ ಲಿಯಾರಿಯಲ್ಲಿ ನಡೆದ ‘ಮಜ್ಲಿಸ್-ಎ-ಇತ್ತೆಹಾದ್-ಎ-ಉಮ್ಮತ್’ ಸಮ್ಮೇಳನವನ್ನು ಉದ್ದೇಶಿಸಿ ರೆಹಮಾನ್ ಮಾತನಾಡಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದ ಹಿನ್ನೆಲೆಯಾಗಿ ಈ ಪಟ್ಟಣವು ಇತ್ತೀಚೆಗೆ ಅಂತರರಾಷ್ಟ್ರೀಯ ಗಮನ ಸೆಳೆಯಿತು.
ಅಫ್ಘಾನಿಸ್ತಾನದಲ್ಲಿ ನಮ್ಮ ಶತ್ರುಗಳ ಮೇಲೆ ದಾಳಿ ಮಾಡಿದೆವು ಎಂದು ನೀವು ಸಮರ್ಥಿಸಿಕೊಂಡರೆ, ಭಾರತವು ಬಹಾವಲ್ಪುರ್, ಮುರಿಯ್ಕೆ ಮತ್ತು ಕಾಶ್ಮೀರದಲ್ಲಿನ ದಾಳಿಗೆ ಕಾರಣವಾದ ಗುಂಪುಗಳ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದೇವೆಂದು ಹೇಳಿಕೊಳ್ಳಬಹುದು. ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನವು ಈಗ ಅದೇ ಆರೋಪಗಳನ್ನು ಹೊರಿಸುತ್ತಿದೆ. ನೀವು ಎರಡೂ ನಿಲುವುಗಳನ್ನು ಹೇಗೆ ಸಮರ್ಥಿಸುತ್ತೀರಿ ಎಂದು ಪಾಕ್ ವಿರುದ್ಧವೇ ರೆಹಮಾನ್ ಗುಡುಗಿದ್ದಾರೆ.
