ಉದಯವಾಹಿನಿ, ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದ್ದು, ಉಪ ಸಭಾಪತಿ ಮೇಲೆ ಕಾಗದ ಪತ್ರ ಎಸೆದು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಬಿಜೆಪಿಯ 10 ಸದಸ್ಯರನ್ನು ಹಾಲಿ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಸದನದಲ್ಲಿ ಅಗೌರವ ತೋರಿದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಬಿ
ಜೆಪಿಯ ಡಾ.ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಮತ್ತು ಭರತ್ ಶೆಟ್ಟಿ ಅವರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಮಾಡಿದ್ದಾರೆ. ಈ 10 ಸದಸ್ಯರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.
ಕಲಾಪದ ವೇಳೆ ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆಯಲಾಗಿದ್ದು, ಈ ಸಂಬಂಧ ಸ್ಪೀಕರ್ ಯುಟಿ ಖಾದರ್ ಅವರಿಗೆ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ. ಇದೀಗ ಈ ದೂರಿನ ಅಧಾರದ ಮೇಲೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿ, ಸದನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕ್ರಮ ಕೈಗೊಂಡಿರುವ ಸ್ಪೀಕರ್ ಯುಟಿ ಖಾದರ್ ಅವರು ಬಿಜೆಪಿಯ 10 ಸದಸ್ಯರನ್ನು ಅಮಾನತು ಮಾಡಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಪ್ರತಿಪಕ್ಷ ನಾಯಕರ ಸಭೆಗೆ ನಾಯಕರ ಆಹ್ವಾನಕ್ಕೆ ಐಎಎಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಉಪ ಸಭಾಪತಿಗಳು ಭೋಜನ ವಿರಾಮವನ್ನೂ ನೀಡದೇ ಕಲಾಪ ಮುಂದುವರೆಸಿದ್ದರಿಂದ ಬಿಜೆಪಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸ್ಪೀಕರ್ ನಿರ್ಧಾರದ ವಿರುದ್ಧ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾಂಗಣದಲ್ಲಿ ಕಾಗದಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಕಲಾಪ ನಡೆಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು, ಸ್ಪೀಕರ್ ಯು ಟಿ ಖಾದರ್ ಅವರು ಸದನವನ್ನು ಊಟಕ್ಕೆ ಬಿಡುವುದಿಲ್ಲ ಮತ್ತು ಬಜೆಟ್ ಮತ್ತು ಬೇಡಿಕೆಗಳ ಮೇಲಿನ ಚರ್ಚೆ ಮುಂದುವರಿಯುತ್ತದೆ ಎಂದು ಹೇಳಿದರು. ಊಟಕ್ಕೆ ಹೋಗಲು ಬಯಸುವ ಸದಸ್ಯರು ಊಟ ಮಾಡಿ ಚರ್ಚೆಗೆ ಮರಳಬಹುದು ಎಂದು ಹೇಳಿದರು.
