ಉದಯವಾಹಿನಿ, ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಹಲವು ದಶಕಗಳ ಗಡಿ ವಿವಾದದಲ್ಲಿ ಹಿಂದು ದೇವತೆಯ ವಿಗ್ರಹವನ್ನು (ವಿಷ್ಣು ಮೂರ್ತಿ) ಉರುಳಿಸಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ವಿವಾದಿತ ಪ್ರದೇಶದಲ್ಲಿದ್ದ ವಿಷ್ಣು ಮೂರ್ತಿಯನ್ನು ಥಾಯ್ಲೆಂಡ್ ಸೇನೆ ಬುಲ್ಡೋಜರ್ ಬಳಸಿ ಹೊಡೆದು ಹಾಕಿದೆ ಎಂದು ಕಾಂಬೋಡಿಯಾ ಸರ್ಕಾರ ಆರೋಪಿಸಿದೆ. ಈ ಕೃತ್ಯ ಭಾರತ, ಆಗ್ನೇಯ ಏಷ್ಯಾದ ರಾಷ್ಟ್ರಗಳು ಮಾತ್ರವಲ್ಲದೆ ಪ್ರಪಂಚದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರಸ್ತುತ ಕಾಂಬೋಡಿಯಾದ ಅಧೀನದಲ್ಲಿರುವ ಆನ್ ಸೆಸ್ ಪ್ರದೇಶದಲ್ಲಿ 30 ಅಡಿ ಎತ್ತರದ ವಿಷ್ಣುವಿನ ಮೂರ್ತಿಯನ್ನು 2014ರಲ್ಲಿ ಕಾಂಬೋಡಿಯಾ ಸರ್ಕಾರ ನಿರ್ಮಿಸಿತ್ತು. ಈ ಪ್ರದೇಶ ತನ್ನದೆಂದು ಥಾಯ್ಲೆಂಡ್ ವಾದಿಸುತ್ತಿದೆ. ಅನಧಿಕೃತ ಜಾಗದಲ್ಲಿ ಹಿಂದು ದೇವತೆಯ ಮೂರ್ತಿಯನ್ನು ನಿರ್ಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿತ್ತು.
‘ದೇಶದ ಸಂಸ್ಕೃತಿಗೆ ಮಾಡಿದ ಅವಮಾನ’-ಭಾರತ: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ವಿವಾದದಲ್ಲಿ ವಿಷ್ಣುವಿನ ವಿಗ್ರಹವನ್ನು ಹೊಡೆದು ಹಾಕಿದ್ದನ್ನು ಭಾರತದ ವಿದೇಶಾಂಗ ಇಲಾಖೆ ಖಂಡಿಸಿದೆ. ಈ ಕೃತ್ಯವು ದೇಶವೊಂದರ ಸಂಸ್ಕೃತಿಗೆ ಮಾಡಿದ ಅವಮಾನ. ವಿಶ್ವದಾದ್ಯಂತ ಇರುವ ವಿಷ್ಣುವಿನ ಅನುಯಾಯಿಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಥಾಯ್-ಕಾಂಬೋಡಿಯಾದ ವಿವಾದಿತ ಪ್ರದೇಶದಲ್ಲಿ ನೆಲೆಗೊಂಡಿದ್ದ ಹಿಂದೂ ದೇವತೆಯ ಪ್ರತಿಮೆಯನ್ನು ಧ್ವಂಸಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ವಿಶ್ವದಲ್ಲಿ ಹಿಂದೂ ಮತ್ತು ಬೌದ್ಧ ದೇವತೆಗಳನ್ನು ಜನರು ಆಳವಾಗಿ ಪೂಜಿಸುತ್ತಾರೆ, ಆರಾಧಿಸುತ್ತಾರೆ. ಪ್ರತಿಮೆಯನ್ನು ಧ್ವಂಸ ಮಾಡುವ ಮೂಲಕ ಆರಾಧಕರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ” ಎಂದರು. “ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ಕೊನೆಗಾಣಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗ ಅನುಸರಿಸಲು ಸಲಹೆ ನೀಡುತ್ತೇವೆ. ಶಾಂತಿ ಪುನಸ್ಥಾಪಿಸಿ, ಜೀವ, ಆಸ್ತಿ, ಪರಂಪರೆಗೆ ಆಗುವ ಹಾನಿಯನ್ನು ತಪ್ಪಿಸಲು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.
