ಉದಯವಾಹಿನಿ, ಢಾಕಾ: 17 ವರ್ಷಗಳ ಕಾಲ ಸ್ವಯಂ ಗಡಿಪಾರಿನ ನಂತರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ)ದ ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಇಂದು (ಗುರುವಾರ) ಸ್ವದೇಶಕ್ಕೆ ಮರಳಿದರು. ಮುಂಬರುವ ಫೆಬ್ರವರಿ 12ರ ಸಂಸತ್ ಚುನಾವಣೆಗೆ ಮುನ್ನ ಪಕ್ಷದ ಕಾರ್ಯಕರ್ತರಿಗೆ ಅವರು ಚೈತನ್ಯ ತುಂಬುವ ನಿರೀಕ್ಷೆ ಇದೆ.
ಮಾಜಿ ಪ್ರಧಾನಿ ಖಲೀದಾ ಜಿಯಾ ಅನಾರೋಗ್ಯದಿಂದ ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ನೇತೃತ್ವದ ಇಸ್ಲಾಮಿಸ್ಟ್ ಪಕ್ಷ ಜಮಾತ್-ಇ-ಇಸ್ಲಾಮಿ ತನ್ನ ನೆಲೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಇದರ ಮಧ್ಯೆ ದೇಶ ಮುಂಬರುವ ಚುನಾವಣೆಯನ್ನು ಎದುರು ನೋಡುತ್ತಿರುವಾಗ ಮಗನ ಪ್ರವೇಶವಾಗಿದೆ. ಅಷ್ಟೇ ಅಲ್ಲದೇ, ತಾರಿಕ್ ಪ್ರಧಾನಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿಯೂ ಹೊರಹೊಮ್ಮಿದ್ದಾರೆ.
ಕಳೆದ ವರ್ಷ ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಸಾಮೂಹಿಕ ಪ್ರತಿಭಟನೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಭಾರತ ವಿರೋಧಿ ಷರೀಫ್ ಉಸ್ಮಾನ್ ಹಾದಿ ಎಂಬಾತನ ಹತ್ಯೆಯ ನಂತರ ಬಾಂಗ್ಲಾದಲ್ಲಿ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆ ತೀವ್ರಗೊಂಡಿದೆ. ಇದರ ಮಧ್ಯೆ ಈ ಬೆಳವಣಿಗೆ ನಡೆದಿದೆ.
ತಾರಿಕ್ ರೆಹಮಾನ್ ಅವರನ್ನು ಪತ್ನಿ ಜುಬೈದಾ, ಮಗಳು ಜೈಮಾ, ಬಿಎನ್‌ಪಿ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯ ನಡುವೆ ಬರಮಾಡಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಹಸೀನಾ ಅವರ ಅವಾಮಿ ಲೀಗ್ ಪಕ್ಷ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿದೆ. ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಎನ್‌ಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.ವಿಮಾನ ನಿಲ್ದಾಣದಿಂದ ಹೊರಡುವ ಮೊದಲು ರೆಹಮಾನ್, ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರೊಂದಿಗೆ ಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ ಎಂದು ಬಿಎನ್‌ಪಿಯ ಮಾಧ್ಯಮ ಘಟಕ ತಿಳಿಸಿದೆ. ಫೋನ್ ಸಂಭಾಷಣೆಯಲ್ಲಿ ಏನಾಯಿತು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಮೂರು ಬಾರಿ ಪ್ರಧಾನಿಯಾಗಿದ್ದ ಜಿಯಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.ರೆಹಮಾನ್ ಅವರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸುಮಾರು 4,000 ಸೇನಾ ಸಿಬ್ಬಂದಿ, ಪ್ಯಾರಾಮಿಲಿಟರಿ ಸೇರಿದಂತೆ ಇತರೆ ಭದ್ರತಾ ಸಿಬ್ಬಂದಿಯನ್ನು ಢಾಕಾದಲ್ಲಿ ನಿಯೋಜಿಸಲಾಗಿದೆ.ಇನ್ನು, ಹಾದಿ ಎಂಬಾತನ ಸಾವಿನಲ್ಲಿ ಭಾರತದ ಕೈವಾಡವಿದೆ ಎಂಬ ಆಧಾರರಹಿತ ಆರೋಪಗಳು ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಯನ್ನು ಹುಟ್ಟುಹಾಕಿದ್ದು, ಪ್ರಕರಣದ ವಿವರವಾದ ತನಿಖೆ ನಡೆಸುವಂತೆ ಭಾರತ ಒತ್ತಾಯಿಸಿದೆ.ಹಸೀನಾ ಸರ್ಕಾರದ ಪತನದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಭಾರತ-ಬಾಂಗ್ಲಾ ನಡುವಿನ ಸಂಬಂಧಗಳು ದಿನದಿನವೂ ಬಿಗಡಾಯಿಸುತ್ತಿವೆ. ಅಲ್ಪಸಂಖ್ಯಾತರು ಅದರಲ್ಲೂ ಹಿಂದೂಗಳ ಕೊಲೆ, ಅವರ ಮನೆಗಳ ಮೇಲೆ ನಿರಂತರವಾಗಿ ದಾಳಿ, ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ.
