ಉದಯವಾಹಿನಿ, ಒಟ್ಟಾವಾ: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿ.22ರಂದು ಎದೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಪ್ರಶಾಂತ್ ಶ್ರೀಕುಮಾರ್ ಎನ್ನುವವರನ್ನು
ಕೆನಡಾದ ಎಡ್ಮಿಂಟನ್ ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಬಳಿಯೇ ಎಂಟು ಗಂಟೆಗಳ ಕಾಲ ಕಾದಿದ್ದಾರೆ. ಕೊನೆಯಲ್ಲಿ ಶ್ರೀಕುಮಾರ್ ಅವರು ‘ಅಪ್ಪಾ, ನನ್ನಿಂದ ನೋವು ತಡೆಯಲು ಆಗುತ್ತಿಲ್ಲ’ ಎನ್ನುತ್ತಾ ಪ್ರಾಣಬಿಟ್ಟಿದ್ದಾರೆ ಎಂದು ಘಟನೆಯನ್ನು ತಂದೆ ನೆನಪಿಸಿಕೊಂಡಿದ್ದಾರೆ.
‘ನನ್ನ ಮಗನಿಗೆ ವಿಪರೀತ ಎದೆನೋವು ಇತ್ತು. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದಾಗ ಇಸಿಜಿ ಮಾಡಿದ್ದಾರೆ. ಈ ವೇಳೆ ಯಾವುದೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಲ್ಲವೆಂದು ಕಾಯುವಂತೆ ಹೇಳಿದ್ದಾರೆ. ನಂತರ ಟೈಲೆನಾಲ್ ಮಾತ್ರೆಯನ್ನು ನೀಡಿದ್ದಾರೆ. ಆದರೆ ರಕ್ತದೊತ್ತಡ ಹೆಚ್ಚುತ್ತಲೇ ಇತ್ತು’ ಎಂದು ಶ್ರೀಕುಮಾರ್ ಅವರ ತಂದೆ ಹೇಳಿರುವುದಾಗಿ ಗ್ಲೋಬಲ್ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.
‘ಎಂಟು ಗಂಟೆ ಕಾದ ಬಳಿಕ ಚಿಕಿತ್ಸೆಗೆ ಕರೆದರು. ಅಷ್ಟರಲ್ಲಿ ರಕ್ತದೊತ್ತಡ ತೀವ್ರವಾಗಿ ಏರಿಕೆಯಾಗಿತ್ತು. 10 ಸೆಕೆಂಡ್‌ಗಳಲ್ಲಿ ನನ್ನನ್ನು ನೋಡಿ ಅಪ್ಪಾ ನೋವು ತಡೆಯಲಾಗುತ್ತಿಲ್ಲ ಎಂದು ಎದೆಯನ್ನು ಬಿಗಿಯಾಗಿ ಹಿಡಿದುಕೊಂಡು ಬಿದ್ದಿದ್ದಾರೆ, ಮತ್ತೆ ಏಳಲೇ ಇಲ್ಲ’ ಎಂದು ತಂದೆ ಕಣ್ಣೀರಾಗಿದ್ದಾರೆ.
ಶ್ರೀಕುಮಾರ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನೂ ಅಗಲಿದ್ದಾರೆ.
