ಉದಯವಾಹಿನಿ, ಬೆಂಗಳೂರು : ಪತ್ನಿಯನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಪತ್ನಿಯ ಕೆಲಸದ ವಿಚಾರವಾಗಿ ನಡೆದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಯಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿ ಪ್ರಕರಣ ನಡೆದಿದೆ. ಆಯೇಷಾ ಸಿದ್ದಿಕಿ (39) ಕೊಲೆಯಾದ ಮಹಿಳೆ. ಪತಿ ಸೈಯ್ಯದ್ ಜಬಿ ಕೊಲೆ ಆರೋಪಿಯಾಗಿದ್ದು, ಕೊಲೆ ಮಾಡಿದ ಬಳಿಕ ಆರೋಪಿಯು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಆಯೇಷಾ ಸಿದ್ದಿಕಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದು ಪತಿ ಸೈಯ್ಯದ್ ಜಬಿಗೆ ಇಷ್ಟವಿರಲಿಲ್ಲ. ಆ ಕೆಲಸಕ್ಕೆ ಹೋಗಬೇಡ ಎಂದು ಪದೇಪದೇ ಹೇಳುತ್ತಿದ್ದ, ಈ ವಿಚಾರಕ್ಕೆ ಸಂಬಂಧಿಸಿ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಡಿ.26ರ ರಾತ್ರಿ ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ, ಗಂಡನು ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ಮೃತ ಆಯೇಷಾ ಸಿದ್ದಿಕಿಗೆ ಸೈಯ್ಯದ್ ಜಬಿ ಮೂರನೇ ಗಂಡನಾಗಿದ್ದು, ಸೈಯ್ಯದ್ ಜಬಿಗೆ ಆಯೇಷಾ ಸಿದ್ದಿಕಿ ಎರಡನೇ ಪತ್ನಿಯಾಗಿದ್ದರು. ವಿವಾಹವಾದ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಕೊಲೆ ಮಾಡಿದ ಬಳಿಕ ಆರೋಪಿ ಸೈಯ್ಯದ್ ಜಬಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
