ಉದಯವಾಹಿನಿ,  ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ವಿದರ್ಭ ತಂಡ 89 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ವಿದರ್ಭ ತಂಡದ ಗೆಲುವಿಗೆ ನೆರವು ನೀಡಿದ್ದು ಧ್ರುವ್‌ ಶೋರೆ ಇವರು ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ 77 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 109 ರನ್‌ಗಳನ್ನು ಬಾರಿಸಿದರು. ಆ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧದ ಐದನೇ ಲಿಸ್ಟ್ ಎ ಪಂದ್ಯದಲ್ಲಿ ಧ್ರುವ್ ಶೋರೆ ಅವರ ಐದನೇ ಶತಕ ಇದಾಗಿದೆ. ಇದರೊಂದಿಗೆ, ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದ ತಮಿಳುನಾಡಿನ ಎನ್. ಜಗದೀಶನ್ ಅವರ ವಿಶ್ವ ದಾಖಲೆಯನ್ನು ಅವರು (ಧ್ರುವ್‌ ಶೋರೆ) ಸರಿಗಟ್ಟಿದರು. ಧ್ರುವ್ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದಾರೆ, ಚೆನ್ನೈ ಪರ ಅವರು ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದಾರೆ.
2022-23ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಐದು ಶತಕಗಳನ್ನು ಗಳಿಸುವ ಮೂಲಕ ಜಗದೀಶನ್ ಹೊಸ ದಾಖಲೆಯನ್ನು ಬರೆದಿದ್ದರು. ಇದರಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಅವರ 277 ರನ್ ಇನಿಂಗ್ಸ್‌ ಕೂಡ ಸೇರಿದೆ. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರನ ಅತ್ಯಧಿಕ ಸ್ಕೋರ್ ಆಗಿ ಉಳಿದಿದೆ. ಕರುಣ್ ನಾಯರ್, ದೇವದತ್ ಪಡಿಕ್ಕಲ್, ಕುಮಾರ್ ಸಂಗಕ್ಕಾರ ಮತ್ತು ಅಲ್ವಿರೊ ಪೀಟರ್ಸನ್ ಕೂಡ ಸತತ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಇವರಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಕುಮಾರ್ ಸಂಗಕ್ಕಾರ.
ವಿದರ್ಭ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್‌ ಮಾಡುವಂತಾದ ವಿದರ್ಭ 5 ವಿಕೆಟ್ ನಷ್ಟಕ್ಕೆ 365 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ಹೈದರಾಬಾದ್ 49.2 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಗಿ 89 ರನ್‌ಗಳಿಂದ ಪಂದ್ಯವನ್ನು ಸೋತಿತು. ಶತಕ ಬಾರಿಸಿದ ಧ್ರುವ್ ಶೋರೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *

error: Content is protected !!