ಉದಯವಾಹಿನಿ, ಚಿತ್ರದುರ್ಗ: ಹಿರಿಯೂರು ಬಳಿ ನಡೆದ ಸೀಬರ್ಡ್ ಬಸ್ ದುರಂತದಲ್ಲಿ ಮೃತಪಟ್ಟ ಐವರ ಮೃತದೇಹದ ಗುರುತು ಡಿಎನ್‌ಎ ವರದಿಯಿಂದ ಪತ್ತೆಯಾಗಿದ್ದು, ಶವಗಳನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಡಿ.25ರಂದು ಬೆಂಗಳೂರಿನಿಂದ ಸೀಬರ್ಡ್ ಬಸ್‌ನಲ್ಲಿ ಗೋಕರ್ಣ ಶಿವಮೊಗ್ಗ ಹಾಗೂ ಕುಮಟಕ್ಕೆ ತೆರಳಲು ಒಟ್ಟು 32 ಜನ ಪ್ರಯಾಣಿಕರು ತೆರಳುತಿದ್ದರು. ಈ ಬಸ್‌ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊರ್ಲಡಕು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿಕ್ಕಿಯಾಗಿತ್ತು. ಪರಿಣಾಮ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು. ಮೃತದೇಹ ಕರಕಲಾಗಿದ್ದು ಗುರುತು ಪತ್ತೆಯಾಗಿರಲಿಲ್ಲ. ಇದರಿಂದ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು, ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಈ ವೇಳೆ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಮಾನಸ ಹಾಗೂ ನವ್ಯ ಕುಟುಂಬಸ್ಥರು ಗದ್ಗದಿತರಾದರು.
ಮಾನಸ ಮತ್ತು ನವ್ಯ ಚಿಕ್ಕಂದಿನಿಂದಲೂ ಒಟ್ಟಾಗಿ ಬೆಳೆದಿದ್ದು, ಅವರ ಮದುವೆ ಫಿಕ್ಸ್ ಆಗಿತ್ತು. ಮುಂದಿನ ಬದುಕಿನ ಬಗ್ಗೆ ಅಪಾರ ಕನಸು ಕಂಡಿದ್ದರು. ಆದ್ರೆ ವಿಧಿಯಾಟವೇ ಬೇರೆ ಆಗಿದೆ. ಇಂತಹ ಸಾವು ಯಾವ ಶತ್ರುಗಳಿಗೂ ಬರಬಾರದು. ಅವರ ಅಗಲಿಕೆಯ ದುಃಖದಿಂದ ಹೊರಬರಲು ಸಾದ್ಯವಾಗ್ತಿಲ್ಲ. ಒಟ್ಟಾಗಿ ಬೆಳೆದವರು, ಒಂದಾಗಿ ಕೊನೆಯುಸಿರು ಎಳೆದಿದ್ದಾರೆ. ಹೀಗಾಗಿ ಅವರ ಅಂತ್ಯಕ್ರಿಯೆಯನ್ನು ಚನ್ನರಾಯಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಒಟ್ಟಿಗೆ ಮಾಡ್ತೇವೆ ಎಂದು ನವ್ಯ ತಂದೆ ತಿಳಿಸಿದ್ದಾರೆ.
