ಉದಯವಾಹಿನಿ, ಸುರಿನಾಮ್ : ದಕ್ಷಿಣ ಅಮೇರಿಕಾದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ದಕ್ಷಿಣ ಅಮೆರಿಕದ ಸುರಿನಾಮ್‌ನ ರಾಜಧಾನಿ ಪ್ಯಾರಾಮರಿಬೊದ ಹೊರಗೆ ವ್ಯಕ್ತಿಯೊಬ್ಬ ನಡೆಸಿದ ಚಾಕು ದಾಳಿಯಲ್ಲಿ ಐದು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಸುರಿನಾಮ್‌ನ ಕಾಮೆವಿಜ್ನೆಯಲ್ಲಿ ವ್ಯಕ್ತಿಯೊಬ್ಬ ಯದ್ವಾತದ್ವಾ ಇರಿದು ಐದು ಮಕ್ಕಳು ಸೇರಿದಂತೆ ಒಂಬತ್ತು ಜನರನ್ನು ಕ್ರೂರವಾಗಿ ಕೊಂದಿದ್ದಾನೆ. ಪರಮಾರಿಬೊ ಪೊಲೀಸರು ಶಂಕಿತ ಆರೋಪಿಯ ಮೇಲೆ ಗುಂಡು ಹಾರಿಸಿ ಆತನ ಕಾಲುಗಳನ್ನು ಗಾಯಗೊಳಿಸಿ ಬಂಧಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವ ಪ್ರಕಾರ, ಶಂಕಿತನನ್ನು ಫೈರಿಂಗ್ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 27 ರ ಶನಿವಾರದಿಂದ ಡಿಸೆಂಬರ್ 28 ರ ಭಾನುವಾರದವರೆಗೆ ರಾತ್ರಿಯ ವೇಳೆ, ಒಬ್ಬ ಪುರುಷ ವ್ಯಕ್ತಿ ನಾಲ್ವರು ವಯಸ್ಕರು ಮತ್ತು ಐದು ಮಕ್ಕಳನ್ನು ಚೂಪಾದ ವಸ್ತುವಿನಿಂದ ಇರಿದು ಕೊಂದಿದ್ದಾನೆ. ಒಂದು ಮಗು ಮತ್ತು ಒಬ್ಬ ವಯಸ್ಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತನ ಹೆಂಡತಿ ಇತ್ತೀಚೆಗೆ ಆತನನ್ನು ಬಿಟ್ಟು ಹೋಗಿದ್ದು, ಅವರ ನಾಲ್ವರು ಮಕ್ಕಳನ್ನು ಆತನ ಆರೈಕೆಯಲ್ಲಿ ಬಿಟ್ಟು ಹೋಗಿದ್ದಾಳೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶಂಕಿತನು ಚಾಕುವಿನಿಂದ ಶಸ್ತ್ರಸಜ್ಜಿತನಾಗಿ ಮೊದಲು ತನ್ನ ಮಕ್ಕಳ ಮೇಲೆ ಮತ್ತು ನಂತರ ಆರು ನೆರೆಹೊರೆಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಯದ್ವಾತದ್ವಾ ಇರಿದು ಕೊಲೆಯ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರ ತ್ವರಿತ ಕ್ರಮದಿಂದ ಇನ್ನಷ್ಟು ಹಾನಿಯನ್ನು ತಪ್ಪಿಸಲಾಯಿತು ಮತ್ತು ಹೆಚ್ಚಿನ ಸಂಖ್ಯೆಯ ಸಾವುನೋವುಗಳನ್ನು ತಪ್ಪಿಸಲಾಯಿತು ಎಂದು ಹೇಳಲಾಗಿದೆ. ದುರಂತ ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಮತ್ತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರುವ ಸಾಧ್ಯತೆಯಿದೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
