ಉದಯವಾಹಿನಿ , ಚಿಕ್ಕಮಗಳೂರು: ಸರ್ಕಾರ ಬೆಂಗಳೂರಿನ ಕೊಗಿಲುನಲ್ಲಿರುವ ಕೇರಳಿಗರ ಮೇಲೆ ತೋರುತ್ತಿರುವ ಪ್ರೀತಿ-ಕಾಳಜಿಯನ್ನ ಮಲೆನಾಡಿಗರ ಮೇಲೆ ಏಕೆ ತೋರುತ್ತಿಲ್ಲ ಎಂದು ಮೂಡಿಗೆರೆ ತಾಲೂಕಿನ ಮಲೆಮನೆ – ಮುದುಗುಂಡಿ ಗ್ರಾಮದ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 2019ರ ಆಗಸ್ಟ್ 9 ರಂದು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಒಂದೇ ರಾತ್ರಿಗೆ 22 ಇಂಚು ಮಳೆ ಸುರಿದಿತ್ತು. ಇದರಿಂದ ಮಲೆಮನೆ – ಮುದುಗುಂಡಿ ಗ್ರಾಮಗಳು ಗುಡ್ಡದ ಮಣ್ಣು ಕುಸಿದು ಸಂಪೂರ್ಣ ನಾಶವಾಗಿದ್ದವು. ಶತಮಾನದ ಬದುಕು ಕಣ್ಣೆದುರೇ ಕೊಚ್ಚಿ ಹೋಗಿ ಮನೆಯ ಒಂದು ಸಣ್ಣ ಚಮಚ ಕೂಡ ಸಿಕ್ಕಿರಲಿಲ್ಲ. ಅಂದಿನಿಂದಲೂ ಜನ ಸರ್ಕಾರಕ್ಕೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಜನರ ಕಣ್ಣೀರು ಇಂದಿಗೂ ಸರ್ಕಾರಕ್ಕೆ ಕಂಡಿಲ್ಲ.
ಈಗ ಕೇರಳಿಗರ ಮೇಲೆ ಒಂದೇ ರಾತ್ರಿಗೆ ಸರ್ಕಾರಕ್ಕೆ ಬಂದಿರೋ ಪ್ರೀತಿ ಕಂಡು ಮಲೆನಾಡಿಗರು ರೆಬಲ್ ಆಗಿದ್ದಾರೆ. ಆರು ವರ್ಷದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ. ನಮ್ಮ ನೋವಿನ ಕೂಗು ಸರ್ಕಾರಕ್ಕೆ ಏಕೆ ಕೇಳಿಲ್ಲ ಎಂದು ಕಿಡಿಕಾರಿದ್ದಾರೆ. ಕೇರಳಿಗರಿಗೆ ತಕ್ಷಣ ಸ್ಪಂದಿಸಿ ಮನೆ ಕಟ್ಟಿಕೊಡಲು ಮುಂದಾಗಿರುವ ಸರ್ಕಾರಕ್ಕೆ ಆರು ವರ್ಷಗಳಿಂದ ಸ್ವಂತ ಸೂರಿಲ್ಲದೆ ಅಲೆಯುತ್ತಿರುವ ತನ್ನದೇ ರಾಜ್ಯದ ಮಲೆನಾಡಿಗರ ಅಳಲು ಕೇಳಿಸುತ್ತಿಲ್ಲವೇ ಎಂಬ ಆಕ್ರೋಶ ವ್ಯಕ್ತವಾಗಿದೆ.
