ಉದಯವಾಹಿನಿ, ದುಬೈ: ಇಂಗ್ಲೆಂಡ್‌ನ ಜೋ ರೂಟ್ ಮತ್ತು ಟೀಮ್ ಇಂಡಿಯಾದ ಜಸ್‌ಪ್ರೀತ್ ಬುಮ್ರಾ ಅವರು ಕ್ರಮವಾಗಿ ಟೆಸ್ಟ್ ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಶ್ರೇಯಾಂಕದಲ್ಲಿ ಉಭಯ ಆಟಗಾರರು ರೇಟಿಂಗ್ ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದಾರೆ. ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಹ್ಯಾರಿ ಬ್ರೂಕ್ ಮೂರು ಸ್ಥಾನಗಳ ಜಿಗಿತವನ್ನು ಸಾಧಿಸಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಜೋ ರೂಟ್(867) ಅವರಿಗಿಂತ 21 ಅಂಕದ ಹಿನ್ನಡೆಯಲ್ಲಿದ್ದಾರೆ. ಅತ್ತ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಒಂದು ಮತ್ತು ಪಾಕಿಸ್ತಾನದ ನೊಮಾನ್ ಅಲಿ ಎರಡು ಸ್ಥಾನಗಳ ಪ್ರಗತಿಯೊಂದಿಗೆ 843 ಅಂಕದೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.
ನಾಲ್ಕನೇ ಆಶಸ್ ಟೆಸ್ಟ್‌ನಲ್ಲಿ ಬ್ರೂಕ್ 34 ಎಸೆತಗಳಲ್ಲಿ 41 ಮತ್ತು 22 ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದ್ದರು. ಆದರೆ ರೂಟ್ 15 ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗುವುದರೊಂದಿಗೆ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡು ಇನ್ನಿಂಗ್ಸ್‌ಗಳಲ್ಲಿ 38 ಎಸೆತಗಳಲ್ಲಿ 15 ರನ್ ಗಳಿಸಿದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನಾಲ್ಕು ವಿಕೆಟ್‌ಗಳಿಂದ ಗೆದ್ದಿತು. 18 ಪಂದ್ಯಗಳ ನಂತರ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್‌ನ ಮೊದಲ ಟೆಸ್ಟ್ ಗೆಲುವು ಇದಾಗಿತ್ತು. ಏತನ್ಮಧ್ಯೆ, ಭಾರತದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಮತ್ತೆ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿನ ಶ್ರೇಯಾಂಕದಲ್ಲಿ ಅಲೆಕ್ಸ್ ಕ್ಯಾರಿ ನಾಲ್ಕು ಸ್ಥಾನ ಕುಸಿತ ಕಂಡ ನಂತರ ಇದು ಸಂಭವಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೆಲ್ಬೋರ್ನ್ ಟೆಸ್ಟ್‌ನ ಎರಡು ಇನ್ನಿಂಗ್ಸ್‌ಗಳಲ್ಲಿ 20 ಮತ್ತು ನಾಲ್ಕು ರನ್ ಗಳಿಸಿದ್ದರು.
