ಉದಯವಾಹಿನಿ, ಲಕ್ನೋ: ಅಯೋಧ್ಯೆಯ ರಾಮಮಂದಿರದಲ್ಲಿಂದು ಪ್ರಾಣ ಪ್ರತಿಷ್ಠಾನ 2ನೇ ವಾರ್ಷಿಕೋತ್ಸವ ಅಂಗವಾಗಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು ಅನ್ನಪೂರ್ಣಾ ದೇವಾಲಯದ ಮೇಲೆ ಧ್ವಜಾರೋಹಣ ನೆರವೇರಿಸಿದರು. ಪ್ರಾಣ ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್‌ನಾಥ್ ಸಿಂಗ್ ಭಾಗಿಯಾಗಿದ್ದರು. ಅವರ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ರಾಮ ಮಂದಿರಕ್ಕೆ ತೆರಳುವ ಮುನ್ನ ಇಬ್ಬರು ನಾಯಕರು ಹನುಮಾನ್‌ಗಢಿ ದೇವಾಲಯಕ್ಕೆ ಭೇಟಿ, ನೀಡಿ ಪೂಜೆ ಸಲ್ಲಿಸಿದರು. ನಂತರ ರಾಮಮಂದಿರದಲ್ಲಿ ರಾಮ್ ಲಲ್ಲಾ ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಆನಂತರ ಅನ್ನಪೂರ್ಣಾ ದೇವಾಲಯದ ಮೇಲೆ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, 500 ವರ್ಷಗಳ ಕಾಯುವಿಕೆಯ ನಂತರ ಭವ್ಯವಾದ ದೇವಾಲಯದಲ್ಲಿ ಭಗವಾನ್ ಶ್ರೀ ರಾಮ ಪ್ರತಿಷ್ಠಾಪನೆಗೊಂಡನು. ಇನ್ನೂ ಸಾವಿರಾರು ವರ್ಷಗಳವರೆಗೂ ರಾಮಲಲ್ಲಾ ದೇವಾಲಯವು ರಾಮನ ಜೀವನವನ್ನು ವೈಭವೀಕರಿಸುತ್ತಲೇ ಇರುತ್ತದೆ. ಈ ರಾಮಮಂದಿರ ಅಯೋಧ್ಯೆಯಲ್ಲಿ ಧರ್ಮದ ಧ್ವಜವು ಎತ್ತರಕ್ಕೆ ಹಾರುವಂತೆ ಮಾಡಿದೆ. ಈಗಿನ ಸರ್ಕಾರ ನೇತೃತ್ವದಲ್ಲಿ ಅಯೋಧ್ಯೆ ಪ್ರಗತಿ ಹೊಂದುತ್ತಿದೆ. ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣದಂತಹ ಸೌಲಭ್ಯಗಳೊಂದಿಗೆ ಅಯೋಧ್ಯೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಒತ್ತಿಹೇಳಿದರು.
