ಉದಯವಾಹಿನಿ, ಪುಣೆ(ಮಹಾರಾಷ್ಟ್ರ): ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯೊಬ್ಬ ತಮ್ಮ ಪ್ರತಿಸ್ಪರ್ಧಿಯ ‘ಎಬಿ ಫಾರಂ’ ಅನ್ನು ತಿಂದು ಹಾಕಿರುವ ವರದಿಯಾಗಿದೆ. ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಫಾರಂ ನುಂಗಿದ ಆರೋಪದಡಿ ಅಭ್ಯರ್ಥಿಯ ವಿರುದ್ಧ ದೂರು ದಾಖಲಾಗಿದೆ.ಪುಣೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಪ್ರತಿಕ್ರಿಯೆಗಳು ಆರಂಭವಾಗಿದ್ದು, ನಿನ್ನೆ ಎಲ್ಲಾ ಪಕ್ಷಗಳಿಂದಲೂ ಅಧಿಕ ಸಂಖ್ಯೆಯ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿಗಳ ಪರಿಶೀಲನೆ ನಡೆಸುತ್ತಿರುವಾಗ ಈ ಆಘಾತಕಾರಿ ಘಟನೆ ನಡೆದಿದೆ.
ಪುಣೆಯ ವಾರ್ಡ್ ಸಂಖ್ಯೆ 36 (ಎ)ರಲ್ಲಿ ಉಮೇದುವಾರಿಕೆ ಸಲ್ಲಿಕೆಯಿಂದ ಉಂಟಾದ ಗೊಂದಲದಿಂದ ಶಿವಸೇನಾ ಅಭ್ಯರ್ಥಿಯು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಯ ‘ಎಬಿ ಫಾರಂ’ ತಿಂದು ಹಾಕಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಸಹಾಯಕ ಚುನಾವಣಾ ಅಧಿಕಾರಿ ಸಲ್ಲಿಸಿದ ದೂರಿನ ಆಧಾರದ ಮೇಲೆ, ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಶಿವಸೇನಾ ಅಭ್ಯರ್ಥಿ ಉದ್ಧವ್ ಕಾಂಬ್ಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪುಣೆ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 2 ರಿಂದ 2:30ರವರೆಗೆ ಧಂಕವಾಡಿ ಸಹಕಾರನಗರ ಪ್ರಾದೇಶಿಕ ಕಚೇರಿಯಲ್ಲಿ ಅರ್ಜಿಗಳ ಪರಿಶೀಲನೆ ನಡೆಯುತ್ತಿತ್ತು. ವಾರ್ಡ್ ಸಂಖ್ಯೆ 36 (ಎ)ರಲ್ಲಿ ಶಿವಸೇನಾ ಪಕ್ಷವು ಇಬ್ಬರು ಅಭ್ಯರ್ಥಿಗಳಿಗೆ ತಪ್ಪಾಗಿ ‘ಎಬಿ ಫಾರಂ’ಗಳನ್ನು ನೀಡಿತ್ತು. ಇದು ಶಿವಸೇನಾ ಅಭ್ಯರ್ಥಿಗಳಾದ ಉದ್ಧವ್ ಕಾಂಬ್ಳೆ ಮತ್ತು ಮಚ್ಚಿಂದ್ರ ಧಾವಳೆ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆ ಶಿವಸೇನಾ ಅಭ್ಯರ್ಥಿ ಕಾಂಬ್ಳೆ ಅವರು ಧಾವಳೆ ಅವರ ‘ಎಬಿ ಫಾರಂ’ ಅನ್ನು ಇದ್ದಕ್ಕಿದ್ದಂತೆ ಕಸಿದುಕೊಂಡು, ಅದನ್ನು ಹರಿದು ತಿಂದು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಸಾರ್ವಜನಿಕ ಸೇವಕರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಉದ್ಧವ್ ಕಾಂಬ್ಳೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಗೊಂದಲ ಹುಟ್ಟುಹಾಕಿದೆ. ಸುದ್ದಿ ಗೊತ್ತಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. ಪರಿಸ್ಥಿತಿಯನ್ನು ಗಮನಿಸಿದ ಪೊಲೀಸರು, ತಕ್ಷಣ ಸ್ಥಳಕ್ಕೆ ಧಾವಿಸಿ ಗೊಂದಲವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
