ಉದಯವಾಹಿನಿ, ಜೈಪುರ : ಹೊಸ ವರ್ಷದ ಮುನ್ನಾದಿನವಾದ ರಾಜಸ್ಥಾನದ ರಾಜಧಾನಿ ಜೈಪುರ ವಿಶೇಷ ಸಂದೇಶದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿತು. ನಗರದಾದ್ಯಂತ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು ಒಂದು ಲಕ್ಷ ಲೀಟರ್ ಹಾಲು ವಿತರಿಸಲಾಯಿತು. ಹೊಸ ವರ್ಷವನ್ನು ಮದ್ಯದ ಬದಲು ಹಾಲಿನೊಂದಿಗೆ ಆಚರಿಸೋಣ ಎಂಬುದೇ ಇಲ್ಲಿರುವ ಸಂದೇಶ.
ರಾಜಸ್ಥಾನ ಯುವ ವಿದ್ಯಾರ್ಥಿಗಳ ಸಂಘಟನೆ ಮತ್ತು ಭಾರತೀಯ ಅಸ್ತಮಾ ಆರೈಕೆ ಸಂಘವು ರಾಜಸ್ಥಾನ ವಿಶ್ವವಿದ್ಯಾಲಯದ ದ್ವಾರದಲ್ಲಿ ಹಾಲು ವಿತರಿಸಿತು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಾವಿರಾರು ಜನರು ಹಾಲು ಸ್ವೀಕರಿಸಿ ಸೇವಿಸಿದರು. ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ಪಚಾರ್ ಮೆಚ್ಚುಗೆ ವ್ಯಕ್ತಪಡಿಸಿ, “ರಾಜಸ್ಥಾನ ವಿವಿಯ ದ್ವಾರದಲ್ಲಿ ಹಾಲು ವಿತರಣಾ ಕಾರ್ಯಕ್ರಮ ಮಾಡಿರುವುದು ಅತ್ಯಂತ ಶ್ಲಾಘನೀಯ. ಇದು ಹೊಸ ವರ್ಷವನ್ನು ಮದ್ಯದ ಬದಲು ಹಾಲಿನೊಂದಿಗೆ ಪ್ರಾರಂಭಿಸಬೇಕೆಂಬ ಸಂದೇಶ ನೀಡುತ್ತದೆ. ಹೊಸ ವರ್ಷ ಎಲ್ಲರಿಗೂ ಶುಭವಾಗಬೇಕು. ಅದಕ್ಕಾಗಿ ಮೊದಲ ದಿನದಿಂದಲೇ ಒಳ್ಳೆಯ ಆರಂಭ ಅತ್ಯಗತ್ಯ. ಹೊಸ ವರ್ಷವನ್ನು ಶಾಂತಿಯುತವಾಗಿ ಆಚರಿಸೋಣ” ಎಂದು ಅವರು ಮನವಿ ಮಾಡಿದರು. ವಿಶ್ವವಿದ್ಯಾಲಯದ ದ್ವಾರದಲ್ಲಿ ಹಾಲು ವಿತರಣಾ ಕಾರ್ಯಕ್ರಮವು 21 ವರ್ಷಗಳ ಹಿಂದೆ ಹೊಸ ವರ್ಷದ ಮುನ್ನಾದಿನದಂದು 500 ಲೀಟರ್ ಹಾಲು ವಿತರಿಸುವ ಮೂಲಕ ಶುರುವಾಗಿತ್ತು. ಇದು ಮುಂದಿನ ವರ್ಷಗಳಲ್ಲಿ ಬೆಳೆದು ಈಗ 8,000 ಲೀಟರ್ ಹಾಲು ವಿತರಣೆಯವರೆಗೆ ತಲುಪಿದೆ. ಇದೀಗ ಜೈಪುರ ನಗರದಾದ್ಯಂತ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಾಲು ವಿತರಣಾ ಕಾರ್ಯಕ್ರಮಗಳು ನಡೆಯುತ್ತಿವೆ.
