ಉದಯವಾಹಿನಿ, ಹೊಸ ವರುಷದ ಸಂಭ್ರಮಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಜಪಾನ್‌ನಲ್ಲಿ 6 ತೀವ್ರತೆಯ ಭೂಕಂಪ ಸಂಭವಿಸಿದೆ. ನೋಡಾ ನಗರದಿಂದ ಪೂರ್ವಕ್ಕೆ ಸುಮಾರು 91 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಮಾಹಿತಿ ನೀಡಿದೆ. ವರದಿ ಪ್ರಕಾರ, ಡಿಸೆಂಬರ್ 31ರಂದು ಸಂಭವಿಸಿದ ಈ ಭೂಕಂಪನದ ಆಳ 19.3 ಕಿಲೋಮೀಟರ್ ಆಗಿತ್ತು. ಭೂಕಂಪದ ಕೇಂದ್ರಬಿಂದು 40.112 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 142.889 ಡಿಗ್ರಿ ಪೂರ್ವ ರೇಖಾಂಶದಲ್ಲಿ ಇತ್ತು. ಈ ಘಟನೆಯಲ್ಲಿ ಸಾವು ಅಥವಾ ಆಸ್ತಿ ನಷ್ಟದ ಕುರಿತು ಯಾವುದೇ ವರದಿಗಳು ಬಂದಿಲ್ಲ. ಭೂಕಂಪನದ ಸಮಯದಲ್ಲಿ ಜನ ಭೀತಿಯಿಂದ ಮನೆಯಿಂದ ಹೊರಗೋಡಿಬಂದಿದ್ದಾರೆ.
ಇದಕ್ಕೂ ಮುನ್ನಡಿಸೆಂಬರ್ 8ರಂದು ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಪರಿಣಾಮವಾಗಿ ಪೆಸಿಫಿಕ್ ಕರಾವಳಿಯಲ್ಲಿ ಸುಮಾರು 50 ಸೆಂ.ಮೀ ಎತ್ತರದ ಸುನಾಮಿ ಉಂಟಾಗಿದ್ದು, ಹೊಕ್ಕೊಡೋ ಪ್ರಾಂತ್ಯದ ಉರಕಾವಾ ನಗರ ಹಾಗೂ ಅಮೋರಿ ಪ್ರಾಂತ್ಯದ ಮುಟ್ಟು-ಒಗಾವಾರಾ ಬಂದರು ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು.
