ಉದಯವಾಹಿನಿ, ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 1.65 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ. ಆ ಮೂಲಕ ಅವರ ಆಸ್ತಿ ಮೌಲ್ಯ ಕಳೆದ ವರ್ಷಕ್ಕಿಂತ ಸುಮಾರು 68,455 ರುಪಾಯಿ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 31ರಂದು ಬಿಹಾರ ಸರ್ಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ನಿತೀಶ್ ಕುಮಾರ್ 20,552 ರುಪಾಯಿ ನಗದು ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 57,800 ರುಪಾಯಿ ಡೆಪಾಸಿಟ್ ಹೊಂದಿದ್ದಾರೆ.
ನಿತೀಶ್ ಕುಮಾರ್ ಸರ್ಕಾರವು ಪ್ರತಿಯೊಂದು ಕ್ಯಾಲೆಂಡರ್ ವರ್ಷದ ಕೊನೆಯ ದಿನದಂದು ಎಲ್ಲ ಸಚಿವ ಸಂಪುಟ ಸದಸ್ಯರು ತಮ್ಮ ಆಸ್ತಿ ಹಾಗೂ ಬಾಧ್ಯತೆಗಳ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿದೆ. ಆಸ್ತಿ ವಿವರ ಬಹಿರಂಗವಾದ ಪ್ರಕಾರ ಹಲವು ಸಚಿವರು ಮುಖ್ಯಮಂತ್ರಿಗಿಂತ ಶ್ರೀಮಂತರಾಗಿದ್ದಾರೆ.
ಸಂಪುಟ ಸಚಿವಾಲಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿಯ ಪ್ರಕಾರ, ನಿತೀಶ್ ಕುಮಾರ್ ಸುಮಾರು 7.66 ಲಕ್ಷ ರುಪಾಯಿ ಮೌಲ್ಯದ ಚರ ಆಸ್ತಿಗಳನ್ನು ಹೊಂದಿದ್ದರೆ, 1.48 ಕೋಟಿ ರುಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ. ನವದೆಹಲಿಯ ದ್ವಾರಕಾದಲ್ಲಿರುವ ಸಹಕಾರಿ ವಸತಿ ಸಂಘದಲ್ಲಿ ಮುಖ್ಯಮಂತ್ರಿಗೆ ಕೇವಲ ಒಂದು ವಸತಿ ಫ್ಲಾಟ್ ಮಾತ್ರ ಇದೆ. 2024ರಲ್ಲಿ ಮುಖ್ಯಮಂತ್ರಿ 1.64 ಕೋಟಿ ರುಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದರು. ಮುಖ್ಯಮಂತ್ರಿ ಬಳಿ 10 ಹಸುಗಳು ಮತ್ತು 13 ಕರುಗಳಿವೆ. ಹಾಗೆಯೇ 11.32 ಲಕ್ಷ ರುಪಾಯಿ ಮೌಲ್ಯದ ಕಾರು ಇದೆ.
