ಉದಯವಾಹಿನಿ, ಹಾವೇರಿ: ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಸುಂಟರಗಾಳಿಗೆ ಬೃಹತ್ ಪೆಂಡಾಲ್ ಕುಸಿದು ಬಿದ್ದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ. ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿ ಶಂಕುಸ್ಥಾಪನೆಯ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ತೆರಳುವ ಮೊದಲು ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಸುಂಟರಗಾಳಿ ಬೀಸಿದ್ದು ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್ ಕುಸಿದು ಬಿದ್ದಿದೆ.
ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜನ ಹೊರ ಬಂದಿದ್ದರಿಂದ ಯಾರಿಗೂ ಏನು ಆಗಲಿಲ್ಲ. ಕಾರ್ಯಕ್ರಮ ನಡೆಯುವಾಗಲೇ ಕುಸಿದಿದ್ದರೆ ಹಲವು ಮಂದಿಗೆ ಗಾಯವಾಗುವ ಸಾಧ್ಯತೆ ಇತ್ತು. ಈ ಘಟನೆಯಿಂದ ಕ್ಷಣ ಕಾಲ ವಿಚಲಿತರಾದ ಸತೀಶ್ ಜಾರಕಿಹೊಳಿ ಧೂಳು ಮಿಶ್ರಿತ ಸುಂಟರಗಾಳಿಗೆ ಪೆಂಡಾಲ್ ಕುಸಿದು ಬಿದ್ದಿದೆ. ಸುಂಟರಗಾಳಿಯಿಂದ ಏನೋ ಆಗಿಲ್ಲ ಎಂದು ಹೇಳಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.
