ಉದಯವಾಹಿನಿ, ಮಡಿಕೇರಿ: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿದ್ದ ಅರ್ಹ ಸಂತ್ರಸ್ತರಿಗೆ ಶೀಘ್ರದಲ್ಲೇ ವಸತಿ ಸೌಲಭ್ಯ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದ್ರೆ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ತಟದಲ್ಲಿರುವ ಸಂತ್ರಸ್ತರ ಬದುಕು ಇಂದಿಗೂ ಅತಂತ್ರವಾಗಿಯೇ ಇದೆ.
ಹೌದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್ ಪೋನ್ನಣ್ಣ ಅವರ ಕ್ಷೇತ್ರದಲ್ಲಿ ಜನ ಈ ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವುದರಿಂದ ತಟದಲ್ಲಿರುವ ಜನ ಅಲೆದಾಡಬೇಕಾಗಿದೆ. ಕಾವೇರಿ ನದಿ ತಟದಲ್ಲಿರುವ ಜನ 2018ರಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಕ್ಕಿ ಮನೆ ಮಠ ಕಳೆದುಕೊಂಡರು. ಅಂದಿನಿಂದ ಈವರೆಗೆ ಶಾಶ್ವತ ಪರಿಹಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಪ್ಲಾಸ್ಟಿಕ್ ಟಾರ್ಪಾಲ್, ಶೀಟ್‌ಗಳಿಂದ ತಾತ್ಕಾಲಿಕ ಶೆಡ್‌ಗಳನ್ನ ನಿರ್ಮಾಣ ಮಾಡಿಕೊಂಡು ಶಾಶ್ವತ ಸೂರಿಗಾಗಿ ಕಾಯುತ್ತಿದ್ದಾರೆ. ಆದ್ರೆ ಅದಿನ್ನೂ ಕನಸಾಗಿಯೇ ಉಳಿದಿದೆ. ಜಿಲ್ಲಾಡಳಿತವಾಗಲಿ ರಾಜಕೀಯ ಮುಖಂಡರಾಗಲಿ, ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಜನ ಆಡಳಿತ ವರ್ಗದ ವಿರುದ್ಧ ಹಿಡಿ ಶಾಪ ಹಾಕ್ತಿದ್ದಾರೆ.
