ಉದಯವಾಹಿನಿ, ಜಕಾರ್ತಾ: ವಿವಾಹ ಪೂರ್ವ ಲೈಂಗಿಕ ಕ್ರಿಯೆ ನಡೆಸಿದರೆ ಇಂಡೋನೇಷ್ಯಾದಲ್ಲಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ದೇಶದಲ್ಲಿ ಹೊಸ ಕ್ರಿಮಿನಲ್ ಕೋಡ್ ಅನ್ನು ಪರಿಚಯಿಸಲಾಗಿದ್ದು, ಜನವರಿ 2ರಿಂದಲೇ ಜಾರಿಯಾಗಿದೆ. ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅದನ್ನು ರಾಷ್ಟ್ರಕ್ಕೆ ಅವಮಾನ ಮಾಡುವುದು ಎಂಬ ಅಪರಾಧದಡಿ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನಿನ ದುರ್ಬಳಕೆಯನ್ನು ತಡೆಯಲು ಸಾರ್ವಜನಿಕ ಮೇಲ್ವಿಚಾರಣೆ ಅಗತ್ಯವಿರುವುದಾಗಿ ಸರ್ಕಾರದ ಸಚಿವರೊಬ್ಬರು ತಿಳಿಸಿದ್ದಾರೆ.
345 ಪುಟಗಳಿರುವ ಈ ಕೋಡ್ 2022ರಲ್ಲಿ ಅಂಗೀಕೃತವಾಗಿದ್ದು, ಡಚ್ ಕಾಲದ ವೇಳೆ ಜಾರಿಗೆ ತಂದ ಹಳೆಯ ಕಾನೂನುಗಳನ್ನು ಬದಲಾಯಿಸುತ್ತದೆ. ತಮ್ಮ ಹೆಂಡತಿ ಅಥವಾ ಗಂಡನನ್ನು ಹೊರತುಪಡಿಸಿ ಬೇರೆಯವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅಂಥವರಿಗೆ ವ್ಯಭಿಚಾರದ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಸಂಗಾತಿ, ಪೋಷಕರು, ಮಕ್ಕಳು ಈ ಬಗ್ಗೆ ದೂರು ನೀಡಿದರೆ ಪ್ರಕರಣ ದಾಖಲಿಸಲಾಗುತ್ತದೆ. ಈ ಹೊಸ ಕಾನೂನು ನಾಗರಿಕ ಹಕ್ಕುಗಳು ಮತ್ತು ಮಾತಿನ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು ಎಂಬ ಟೀಕೆಗಳು ವ್ಯಕ್ತವಾಗಿವೆ.
ನಾವು ಕುರುಡರಲ್ಲ. ಆದರೆ ಮುಖ್ಯವಾದುದು ಸಾರ್ವಜನಿಕ ನಿಯಂತ್ರಣ. ಹೊಸ ಕಾನೂನು ಬಂದಾಗ ತಕ್ಷಣವೇ ಅಳವಡಿಸಲಾಗುವುದಿಲ್ಲ. ದಶಕಗಳ ಕಾಲ ನಡೆದಿದ್ದ ಈ ಪ್ರಕ್ರಿಯೆಯಲ್ಲಿ, ಆಗಿನ ಅಧ್ಯಕ್ಷ ಜೋಕೊ ವಿಡೋಡೊ ಅವರ ಅಂತಿಮ ಅವಧಿಯಲ್ಲಿ ಕ್ರಿಮಿನಲ್ ಸಂಹಿತೆಯ ಪರಿಷ್ಕರಣೆಗಳನ್ನು ಅಂಗೀಕರಿಸಲಾಯಿತು ಎಂದು ಕಾನೂನು ಸಚಿವ ಸುಪ್ರತ್ಮಾನ್ ಆಂಡಿ ಅಗ್ಟಾಸ್ ಹೇಳಿದರು. ಹೊಸ ಕಾನೂನಿನ ಪ್ರಕಾರ, ವಿವಾಹ ಪೂರ್ವ ಹಾಗೂ ಅಕ್ರಮ ಸಂಬಂಧದ ಲೈಂಗಿಕ ಕ್ರಿಯೆ ಅಪರಾಧವಾಗಿದೆ. ಈ ಅಪರಾಧ ಸಾಬೀತಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಆದರೆ ಅಪರಾಧಿಯ ಸಂಗಾತಿ, ಪೋಷಕರು ಅಥವಾ ಮಕ್ಕಳು ದೂರು ನೀಡಿದರೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಪ್ರಸ್ತುತ, ಇಂಡೋನೇಷ್ಯಾದಲ್ಲಿ ವ್ಯಭಿಚಾರ ಮಾತ್ರ ಅಪರಾಧವಾಗಿದೆ.
