
ಉದಯವಾಹಿನಿ ದೇವನಹಳ್ಳಿ: ಆಗಸ್ಟ್ 31ರಂದು ಸರಕಾರದಿಂದ ದೇವನಹಳ್ಳಿಯಲ್ಲಿಯೇ ಶರಣ ನೂಲಿಯ ಚನ್ನಯ್ಯ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಪೂರ್ವ ಭಾವಿ ಸಭೆಯಲ್ಲಿ ಮಾಜಿ ಶಾಸಕ ಹಾಗೂ ಕೊರಮ ಸಮಾಜದ ತಾಲೂಕು ಗೌರವಾಧ್ಯಕ್ಷ ಜಿ.ಚಂದ್ರಣ್ಣ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರಮ ಸಮಾಜದ 2023-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಮಂತ್ರಿಯಾಗಿದ್ದ ಶರಣ ನೂಲಿಯ ಚನ್ನಯ್ಯ ಅವರು ಎಲ್ಲಾ ಸಮುದಾಯಕ್ಕೆ ಸ್ಫೂರ್ತಿದಾಯರಾಗಿದ್ದಾರೆ. ದೇವನಹಳ್ಳಿ ತಾಲೂಕಿನಾದ್ಯಂತ ಸುಮಾರು 8-10 ಸಾವಿರ ಸಮಾಜದವರಿದ್ದು, ರಾಜ್ಯದಲ್ಲಿ ಸುಮಾರು 15-20ಲಕ್ಷ ಜನಸಂಖ್ಯೆ ಹಾಗೂ ದೇಶದಾದ್ಯಂತ 2ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮಾಜವಾಗಿದೆ. ರಾಜ್ಯದಲ್ಲಿ ಕೊರಮ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂಬರುವಂತೆ ಎಲ್ಲಾ ರೀತಿಯಲ್ಲಿ ಸಂಘಟಿಸಲಾಗುವುದು ಎಂದರು.
ನೂತನ ತಾ.ಅಧ್ಯಕ್ಷ ಎ.ಕೆ.ಪಿ.ನಾಗೇಶ್ ಮಾತನಾಡಿ, ಸಂಘದಲ್ಲಿ ಕಾರ್ಯಕಾರಿ ಮಂಡಳಿಗೆ 10 ಜನರನ್ನು ಆಯ್ಕೆ ಮಾಡಲಾಗಿದ್ದು, 12 ಜನರು ನಿರ್ದೇಶಕರಿರುತ್ತಾರೆ. ಹಳೇ ತಾಲೂಕು ಕಚೇರಿ ರಸ್ತೆಯಲ್ಲಿ ಸಮಾಜದ ಸುಮಾರು 70*105 ಅಡಿಗಳ ಜಾಗವಿದ್ದು, ಆ ಜಾಗದಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಕಟ್ಟಡದ ನೆಲಹಂತಸ್ತಿನಲ್ಲಿ ಮಳಿಗೆಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸದೃಢಗೊಳಿಸಲು ಮುಂದಾಗಲಾಗುವುದು. ಕಟ್ಟಡ ಕಟ್ಟಲು ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ. ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಅಭಿನಂದಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ನೂತನ ಪದಾಧಿಕಾರಿಗಳು: ಗೌರವಾಧ್ಯಕ್ಷ ಜಿ.ಚಂದ್ರಣ್ಣ, ತಾಲೂಕು ಅಧ್ಯಕ್ಷ ಕೆ.ನಾಗೇಶ್, ಉಪಾಧ್ಯಕ್ಷ ಜಿ.ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಆರ್.ಭರತ್‌ಕುಮಾರ್, ಖಜಾಂಚಿ ಆರ್.ಶಂಕರ್, ಕಾರ್ಯದರ್ಶಿ ವಕೀಲ ಶ್ರೀನಿವಾಸ್, ಸಂ.ಕಾ. ನವೀನ್‌ಕುಮಾರ್, ಜಿ.ಗಣೇಶ್‌ಬಾಬು, ನಿರ್ದೇಶಕರಾದ ಪ್ರಭಾಕರ್, ಮಲ್ಲಿಕಾರ್ಜುನ್, ಲೋಕೇಶ್, ಚಂದ್ರಪ್ಪ, ಶಿವಕುಮಾರ್, ಶ್ರೀಧರ್, ಗಣೇಶ್‌ಬಾಬು, ಡಾ.ಸತೀಶ್‌ಬಾಬು, ಮುನಿಯಪ್ಪ, ಉದಯರವಿ, ಡಿ.ಕೆ.ರಾಜು, ಚಂದ್ರಸಾಗರ್, ಯುವ ಸಮಿತಿಯ ಬಿ.ಎಸ್.ರವಿಚಂದ್ರ, ಚಂದ್ರಸಾಗರ್, ಮಹೇಂದ್ರ, ನಿತಿನ್, ರಾಘವೇಂದ್ರ, ಗಜೇಂದ್ರ, ಸಮುದಾಯ ಸಮಿತಿಯ ಪದಾಧಿಕಾರಿಗಳಾಗಿ ಸಿವಿಲ್ ಇಂಜಿನೀಯರ್ ಜಿ.ರಮೇಶ್, ಚನ್ನಕೇಶವ, ಗಣೇಶ್ ಬಾಬು, ನವೀನ್‌ಕುಮಾರ್, ಶಂಕರ್, ಉದಯರವಿ, ಆರ್.ಭರತ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
