ಉದಯವಾಹಿನಿ,ವಾಷಿಂಗ್ಟನ್ ಡಿಸಿ(ಅಮೆರಿಕ): ಡ್ರಗ್ಸ್ ಮಾಫಿಯಾಕ್ಕೆ ಉತ್ತೇಜನ ನೀಡಿದ ಆರೋಪ ಮತ್ತು ನಿರಂಕುಶ ಆಡಳಿತದ ಪ್ರತಿಪಾದಕ ವೆನಿಜುವೆಲಾ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಶನಿವಾರ ಬಂಧಿಸಿದೆ. ಯಾವುದೇ ಯುದ್ಧ ಮಾಡದೆ, ಇನ್ನೊಂದು ದೇಶದೊಳಗೆ ನುಗ್ಗಿ ಅರ್ಧಗಂಟೆಯಲ್ಲೇ ಅದರ ಅಧ್ಯಕ್ಷರನ್ನು ವಶಕ್ಕೆ ಪಡೆದ ಅಮೆರಿಕ ಸೇನೆಯ ಕ್ಷಿಪ್ರ ಕಾರ್ಯಾಚರಣೆ ವಿಶ್ವವೇ ಅಚ್ಚರಿ ಮತ್ತು ಆತಂಕಪಡುವಂತೆ ಮಾಡಿದೆ.
ಅಮೆರಿಕ ಸೇನೆ ಇದಕ್ಕಾಗಿ ತಿಂಗಳುಗಟ್ಟಲೆ ಪೂರ್ವಾಭ್ಯಾಸ ಮಾಡಿತ್ತು ಎಂಬುದು ಈಗ ಬಯಲಾಗಿದೆ. ದಾಳಿಯ ರೂಪುರೇಷೆ, ಅಧ್ಯಕ್ಷರ ಬಂಧನ ಮತ್ತು ಆ ದೇಶವನ್ನು ವಶಪಡಿಸಿಕೊಳ್ಳುವ ಬಗ್ಗೆ ಮೊದಲೇ ಸ್ಕೆಚ್ ಹಾಕಲಾಗಿತ್ತು ಎಂಬುದನ್ನು ಸ್ವತಃ ಅಮೆರಿಕದ ಸೇನೆ ಹೇಳಿಕೊಂಡಿದೆ.
ರಕ್ಷಣಾ ಗೋಡೆ ಭೇದಿಸಿದ ಸೇನೆ: ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಮಡುರೊ ಬಂಧನಕ್ಕೂ ಮೊದಲು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆತ ಡ್ರಗ್ಸ್ ಮಾಫಿಯಾವನ್ನು ಬೆಳೆಸುತ್ತಿದ್ದ. ಇದು ಅಮೆರಿಕಕ್ಕೆ ಕಂಟಕವಾಗಿತ್ತು. ಕ್ಯಾರಕಸ್‌ನಲ್ಲಿನ ಅಧ್ಯಕ್ಷರ ನಿವಾಸದಲ್ಲಿ ಮಡುರೊ ಬಿಗಿಭದ್ರತೆಯಲ್ಲಿ ಅಡಗಿ ಕುಳಿತಿದ್ದ. ಆತ ಅಲ್ಲಿನ ಸುರಕ್ಷಿತ ಕೋಣೆಯನ್ನು ತಲುಪುವ ಮೊದಲು ನಮ್ಮ ಸೇನೆ ನುಗ್ಗಿ ಬಂಧಿಸಿದೆ” ಎಂದು ತಿಳಿಸಿದ್ದಾರೆ. “ಉಕ್ಕಿನಿಂದ ನಿರ್ಮಿಸಲಾಗಿದ್ದ ರಹಸ್ಯ ಕೋಣೆಯಲ್ಲಿ ಮಡುರೊ ಅಡಗಿದ್ದ. ಅಮೆರಿಕದ ಪಡೆಗಳು ಬೃಹತ್ ಬ್ಲೋ ಟಾರ್ಚ್‌ಗಳನ್ನು ಬಳಸಿ ಆ ಕೋಣೆಯ ಗೋಡೆಗಳನ್ನು ಕತ್ತರಿಸಿದರು. ಆತ ಪೂರ್ಣವಾಗಿ ಆ ಕೋಣೆಯೊಳಗೆ ಹೋಗುವ ಮೊದಲೇ ಆತನನ್ನು ಬಂಧಿಸಲಾಗಿದೆ. ಇಲ್ಲವಾದಲ್ಲಿ ಆತ ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು” ಎಂದು ಹೇಳಿದ್ದಾರೆ.
