ಉದಯವಾಹಿನಿ, ಕ್ಯಾರಕಸ್(ವೆನಿಜುವೆಲಾ): ಡ್ರಗ್ಸ್ ಮಾಫಿಯಾ ಆರೋಪದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಬಂಧಿಸಿದ ಹಿನ್ನೆಲೆಯಲ್ಲಿ ಹಾಲಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವೆನಿಜುವೆಲಾದ ಸುಪ್ರೀಂ ಕೋರ್ಟ್ ಭಾನುವಾರ ನಿರ್ದೇಶಿಸಿದೆ. ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತು ಆಡಳಿತಾತ್ಮಕ ಕಾರ್ಯಗಳು ಮುಂದುವರಿಯಬೇಕಾದ ಕಾರಣ, ಅಧ್ಯಕ್ಷರ ಗೈರು ಹಾಜರಿಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ದೇಶದ ಸಂವಿಧಾನದ ಪ್ರಕಾರ, ಅಧ್ಯಕ್ಷರು ಇಲ್ಲದಾಗ ದೇಶವನ್ನು ಮುನ್ನಡೆಸುವ ಅಧಿಕಾರ ಉಪಾಧ್ಯಕ್ಷರಿಗೆ ಸಿಗಲಿದೆ. ರಾಷ್ಟ್ರದ ಸಮಗ್ರತೆ ಕಾಪಾಡುವ ಮತ್ತು ಆಡಳಿತವು ಸಾಂಗವಾಗಿ ನಡೆಯಲು ಡೆಲ್ಸಿ ಅವರು ಹಂಗಾಮಿ ಅಧ್ಯಕ್ಷರಾಗಲಿದ್ದಾರೆ ಎಂದು ತನ್ನ ಆದೇಶದಲ್ಲಿ ಹೇಳಿದೆ.ವೆನಿಜುವೆಲಾದ ಮೇಲೆ ಶನಿವಾರ ಬಾಂಬ್ ದಾಳಿ ನಡೆಸಿ, ನಿಕೊಲಸ್ ಮಡುರೊ ಅವರನ್ನು ಅಮೆರಿಕದ ಸೇನೆ ಬಂಧಿಸಿ, ನೌಕೆಯಲ್ಲಿ ತನ್ನೊಂದಿಗೆ ಕರೆದೊಯ್ದಿದೆ. ಇದರ ಬಳಿಕ ಮಾತನಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಕ್ಷಿಣ ಅಮೆರಿಕದ ದೇಶವನ್ನು ತಾತ್ಕಾಲಿಕವಾಗಿ ಅಮೆರಿಕದ ನಿಯಂತ್ರಣಕ್ಕೆ ಒಳಪಟ್ಟಿರಲಿದೆ ಎಂದು ಘೋಷಿಸಿದ್ದರು. ಆದರೆ, ಇದಕ್ಕೆ ವಿರುದ್ಧವಾಗಿ ವೆನಿಜುವೆಲಾ ಸುಪ್ರೀಂಕೋರ್ಟ್ ರೋಡ್ರಿಗಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.ಕುಖ್ಯಾತ ಜೈಲಿನಲ್ಲಿ ಮಡುರೊ ಬಂಧನ?: ನಿರಂಕುಶಾಧಿಕಾರಿ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ಬಳಿಕ ಸೇನಾ ನೌಕೆಯಲ್ಲಿ ಅಮೆರಿಕಕ್ಕೆ ಕರೆತರಲಾಗಿದೆ. ಅವರನ್ನು ನ್ಯೂಯಾರ್ಕ್ನಲ್ಲಿರುವ ಮೆಟ್ರೋಪಾಲಿಟಿನ್ ಬಂಧನ ಕೇಂದ್ರದಲ್ಲಿ ಇರಿಸುವ ಸಾಧ್ಯತೆ ಇದೆ. ಈ ಜೈಲು ಕುಖ್ಯಾತ ಕೈದಿಗಳಿಗೆ ಹೆಸರುವಾಸಿ. ಅದರ ಭದ್ರತೆ ಮತ್ತು ಸುರಕ್ಷತೆಯ ಮೇಲೆ ಹಲವು ಬಾರಿ ಪ್ರಶ್ನೆ ಎದ್ದಿದ್ದವು. 2024ರಲ್ಲಿ ಘರ್ಷಣೆ ಏರ್ಪಟ್ಟು ಜೈಲಿನಲ್ಲೇ ಕೈದಿಗಳು ಬಡಿದಾಡಿಕೊಂಡು ಮೃತಪಟ್ಟಿದ್ದರು.
ನೊಬೆಲ್ ಶಾಂತಿ ಪುರಸ್ಕೃತೆಗೆ ತಪ್ಪಿದ ಅಧಿಕಾರ: ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ, ನೊಬೆಲ್ ಶಾಂತಿ ಪುರಸ್ಕೃತೆ ಮಾರಿಯಾ ಕೊರಿನಾ ಮಚಾಡೊ ಅವರು ನಿಕೋಲಸ್ ಮಡುರೊ ಬಂಧನದ ಬಳಿಕ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದರು. ಆದರೆ, ಈ ಅವಕಾಶ ಕೈತಪ್ಪಿದೆ. ಡೊನಾಲ್ಡ್ ಟ್ರಂಪ್ ಕೂಡ ಅವರಿಗೆ ಅಧಿಕಾರ ನೀಡಲು ನಿರಾಕರಿಸಿದ್ದರು.
