ಉದಯವಾಹಿನಿ, ಬೆಂಗಳೂರು: ಎಂಜಿನಿಯರಿಂಗ್ ನಾವೀನ್ಯತೆ ಮತ್ತು ಅಧಿಕ ಮೌಲ್ಯದ ಮೂಲಸೌಕರ್ಯ ಉಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಬೆಂಗಳೂರು ಮೂಲದ ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣ ರನ್ ವೇ ಸ್ವಚ್ಛತಾ ವಾಹನವನ್ನ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ಅವರು ಸೋಮವಾರ ನೋಯ್ಡಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಗೆ ಹಸ್ತಾಂತರಿಸಿದರು.
ಭಾರತದಲ್ಲಿ ಮೊದಲ ಬಾರಿಗೆ ದೇಶೀಯವಾಗಿ ತಯಾರಿಕೆಯಾದ ರನ್ ವೇ ಸ್ವಚ್ಛತಾ ವಾಹನ ಇದಾಗಿದೆ. ಭಾರತದ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಸ್ವಿಟ್ಜರ್‌ಲ್ಯಾಂಡ್‌ನ ಮೆಸರ್ಸ್ ಬುಕರ್ ಮುನಿಸಿಪಲ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಜೋಡಣೆಗೊಂಡು ತಯಾರಾಗಿರುವ ಈ ಮಾದರಿಯ ಎರಡು ವಾಹನಗಳ ಕೀಲಿಕೈಗಳನ್ನು ನೋಯ್ಡಾ ವಿಮಾನ ನಿಲ್ದಾಣದ ಪ್ರತಿನಿಧಿ ಪ್ರದೀಪ್ ರಾಣಾ ಅವರಿಗೆ ನೀಡಿದರು. ವಿಮಾನದ ಟಯರ್ ಗಳಿಗೆ ಅಪಾಯಕಾರಿಯಾಗಬಹುದಾದ ಮೊಳೆಗಳು ಹಾಗೂ ಚೂಪಾದ ಲೋಹದ ತುಣುಕುಗಳನ್ನು ರನ್ ವೇ ಮೇಲಿಂದ ತೆರವುಗೊಳಿಸುವ ಕಾರ್ಯವನ್ನು ಈ ವಾಹನ ಮಾಡಲಿದೆ. ಧೂಳನ್ನೂ ಹೀರಿಕೊಳ್ಳಲಿದೆ. ಮುಖ್ಯವಾಗಿ ವಿಮಾನಗಳು ಇಳಿಯುವಾಗ ರನ್ ವೇಯಲ್ಲಿ ಜಾರುವ ಸಾಧ್ಯತೆ ತಂದೊಡ್ಡಬಹುದಾದ ಪಾಚಿಯನ್ನೂ ತೆಗೆದುಹಾಕುವ ಕಾರ್ಯವನ್ನ ಈ ವಾಹನ ನಿರ್ವಹಿಸಲಿದೆ.
ನಗರದ ರಸ್ತೆಗಳನ್ನು ಸ್ವಚ್ಛ ಮಾಡುವ ಸ್ವೀಪಿಂಗ್ ಮಿಷಿನ್ ವಾಹನಗಳ ತಯಾರಿಕೆಗೂ ಗಮನ ಕೇಂದ್ರೀಕರಿಸಿರುವ ಆನ್ ಲಾನ್ ನಂತಹ ಕಂಪನಿಗಳು ನಮ್ಮ ಪೂರೈಕೆ ಸರಪಳಿಯ ಬುನಾದಿಯಾಗಿವೆ. ಆನ್ ಲಾನ್ ಕಂಪನಿಯು ಸರ್ಕಾರದ ನೀತಿಗಳು ಹಾಗೂ ಕಾರ್ಯಪರಿಸರವನ್ನ ಬಳಸಿಕೊಂಡು ಈಗ ತಯಾರಿಸಿರುವ ವಾಹನಕ್ಕೆ ರಫ್ತು ಮಾರುಕಟ್ಟೆಗಳನ್ನ ಶೋಧಿಸಿಕೊಳ್ಳಬೇಕು. ನಮ್ಮ ಕೈಗಾರಿಕಾ ನೀತಿಯು (2025-30) ಗುರಿ ನಿರ್ದೇಶಿತ ಬೆಂಬಲ ಹಾಗೂ ಗುಣಮಟ್ಟ ಪ್ರಮಾಣಪತ್ರ ಪ್ರೋತ್ಸಾಹಕ ಕ್ರಮಗಳ ಮೂಲಕ ಆನ್ ಲಾನ್ ನಂತಹ ಕಂಪನಿಗಳಿಗೆ ಉತ್ತೇಜನ ನೀಡುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!