ಉದಯವಾಹಿನಿ, ಬೆಂಗಳೂರು: ‘ಕೋಗಿಲು ಉಳಿಸಿ ಅಕ್ರಮ ವಲಸಿಗರನ್ನು ತೊಲಗಿಸಿ’ ಎನ್ನುವ ಘೋಷವಾಕ್ಯದೊಂದಿಗೆ ಇಂದು ಬಾಗಲೂರು ಮುಖ್ಯ ರಸ್ತೆಯ ಕೌಂಟ್ರಿ ಕ್ಲಬ್ ಹತ್ತಿರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಭಟನೆಗೆ ವೇದಿಕೆ ಹಾಕಲು ಅವಕಾಶ ಕೊಡುವುದಿಲ್ಲ, ಇದೇನು ಇವರ ಅಪ್ಪನ ಮನೆಯ ಸರ್ಕಾರವೇ ಎಂದು ಕಿಡಿಕಾರಿದರು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಇಂಥ ಗೊಡ್ಡು ಬೆದರಿಕೆಗೆ ಹೆದರುವವರು ಬಿಜೆಪಿ ಕಾರ್ಯಕರ್ತರಲ್ಲ, ಇದನ್ನು ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಮನೆ ಕೆಡವಿದ್ದೇ ಕಾಂಗ್ರೆಸ್ ಸರ್ಕಾರ. ಆದರೆ ಕೆ.ಸಿ.ವೇಣುಗೋಪಾಲ್ ಅವರು ಬೆದರಿಸಿದ ತಕ್ಷಣ ಸಿದ್ದರಾಮಯ್ಯನವರು ತಮ್ಮ ಸಿಎಂ ಕುರ್ಚಿ ಕಳೆದುಕೊಳ್ಳುವ ಭೀತಿಯಿಂದ ಅಕ್ರಮ ವಲಸಿಗರಿಗೆ ಮನೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿ ಕಸಿದುಕೊಳ್ಳಬೇಕೆಂಬ ಕಾರಣಕ್ಕಾಗಿ ಕೆ.ಸಿ.ವೇಣುಗೋಪಾಲ್ ಮೂಲಕ ಸಿಎಂಗೆ ಧಮ್ಕಿ ಹಾಕಿಸಿ ಅವರೂ ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕೆ.ಸಿ.ವೇಣುಗೋಪಾಲ್ ಕರ್ನಾಟಕದ ಮುಖ್ಯಮಂತ್ರಿಯೇ? ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿಯೇ ಎಂದು ಕರ್ನಾಟಕದ ಜನರು ಪ್ರಶ್ನಿಸುತ್ತಿದ್ದಾರೆ ಎಂದು ನುಡಿದರು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ರಾಜ್ಯದಲ್ಲಿ 38 ಲಕ್ಷ ಜನರು ಮನೆಗಾಗಿ ಅರ್ಜಿ ಹಾಕಿದ್ದಾರೆ. ಡಾ. ಅಂಬೇಡ್ಕರ್ ಅವರ ಹೆಸರು ಹೇಳುವ ಮುಖ್ಯಮಂತ್ರಿಗಳು ಕಳೆದ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರವು ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ದೂರಿದರು. ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟದ್ದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು.
