ಉದಯವಾಹಿನಿ, ಬೀದರ್: ಅರಣ್ಯ ಭೂಮಿ ಒತ್ತುವರಿ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ಎದುರೇ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಹಾಗೂ ಎಂಎಲ್‌ಸಿ ಭೀಮರಾವ್ ಪಾಟೀಲ್ ಕೈ ಕೈ ಮಿಲಾಯಿಸಿದ ಘಟನೆ ಬೀದರ್ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲಿ ನಡೆದಿದೆ.
ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಮಾತನಾಡಿ, ಹುಮನಾಬಾದ್‌ನಲ್ಲಿರುವ ಒಂದು ಎಕರೆ ಅರಣ್ಯ ಪ್ರದೇಶವನ್ನು ಎಂಎಲ್‌ಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಕೊಡಿ ಎಂದು ಉಸ್ತುವಾರಿ ಸಚಿವರಿಗೆ ಕೇಳಿದರು. ಈ ವೇಳೆ ಯಾವುದೇ ಜಾಗ ಒತ್ತುವರಿಯಾಗಿಲ್ಲ ಎಂದು ಎಂಎಲ್‌ಸಿ ಭೀಮರಾವ್ ಪಾಟೀಲ್ ) ಹಾಗೂ ಚಂದ್ರಶೇಖರ ಪಾಟೀಲ್ ಹೇಳಿದರು. ಆಗ ಸಿದ್ದು ಪಾಟೀಲ್ ಗರಂ ಆಗಿದ್ದಾರೆ.
ಈ ವೇಳೆ ಭೀಮರಾವ್ ಪಾಟೀಲ್ ಮಾತನಾಡಿ, 2028ಕ್ಕೆ ನೋಡು, ಏನು ಮಾಡ್ತೇನೆ ಅಂತ ಎಂದಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದು, ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಈ ವೇಳೆ ಸ್ವತಃ ಸಚಿವ ಈಶ್ವರ್ ಖಂಡ್ರೆ ಅವರು ಮನವೊಲಿಸಲು ಹರಸಾಹಸಪಟ್ಟರು. ಬಳಿಕ ಸಭೆಯನ್ನು ಕೆಲವು ನಿಮಿಷಗಳ ಕಾಲ ಮುಂದೂಡಿದರು. ಎಂಎಲ್‌ಸಿಗಳಾದ ಭೀಮರಾವ್ ಪಾಟೀಲ್ ಮತ್ತು ಚಂದ್ರಶೇಖರ ಪಾಟೀಲ್ ಸಭೆಯಿಂದ ಹೊರನಡೆದರು.
