ಉದಯವಾಹಿನಿ, ಬಾಗಲಕೋಟೆ: ರೈತರು ಇಂದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ನಂದೀಶ್ವರ ನಗರದ ವ್ಯಾಪ್ತಿಯ ಹತ್ತಾರು ಎಕರೆ ಕೃಷಿ ಜಾಗಕ್ಕೆ ಒಳಚರಂಡಿ ನೀರು ನುಗ್ಗುತ್ತಿರುವುದಕ್ಕೆ ಸಿಟ್ಟಾಗಿದ್ದ ರೈತರು ಬಿಟಿಡಿಎ ಕಚೇರಿಗೆ ದೂರು ನೀಡಿದ್ದರು.
ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಿಟ್ಟಾದ ರೈತರು ಎತ್ತಿನ ಬಂಡಿ ಸಮೇತ ಬಿಟಿಡಿಎಗೆ ಮುತ್ತಿಗೆ ಹಾಕಿದ್ದಾರೆ. ಅಧಿಕಾರಿಗಳನ್ನು ಒಳಗಡೆ ಬಿಡದ ರೈತರು ಆಕ್ರೋಶ ಹೊರಹಾಕಿದರು. ವಿಚಾರ ತಿಳಿದು ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನವೊಲಿಸುವ ಪ್ರಯತ್ನ ಮಾಡಿದರು. ಪೊಲೀಸರ ಮನವೊಲಿಕೆಗೆ ಬಗ್ಗದ ರೈತರು ಸಮಸ್ಯೆ ಪರಿಹಾರಕ್ಕೆ ಪಟ್ಟು ಹಿಡಿದರು. ಕೊನೆಗೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ರೈತರು ತಮ್ಮ ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
