ಉದಯವಾಹಿನಿ, ನವದೆಹಲಿ: ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಹಿಂದೂಗಳು ಕುಟುಂಬದಲ್ಲಿ ಜನಸಂಖ್ಯೆ ಹೆಚ್ಚಿಸಲು 4 ಮಕ್ಕಳನ್ನಾದ್ರೂ ಹೊಂದಬೇಕು ಎಂದಿದ್ದ ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಮುಖ್ಯಸ್ಥ ಅಸದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ನನಗೆ ಆರು ಮಕ್ಕಳಿದ್ದಾರೆ, ನೀವು ನಾಲ್ಕು ಮಕ್ಕಳನ್ನು ಹೊಂದುವುದನ್ನು ತಡೆಯುವವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದಲ್ಲಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ತೆಲಂಗಾಣದಲ್ಲಿಯೂ ನಿಯಮವನ್ನು ಬದಲಾಯಿಸಲಾಗಿದೆ. ಇದೇ ವೇಳೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮ್ಮುಖದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಬಗ್ಗೆ ಮಾತನಾಡಿದ್ದರು. ಹಾಗಾದರೆ ಇಲ್ಲಿ ಯಾರೂ ನಿಮ್ಮನ್ನು ತಡೆಯುವುದಿಲ್ಲ ಎಂದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುವ ಮೂಲಕ ಹಿಂದೂಸ್ತಾನ್‌ನ್ನು ಪಾಕಿಸ್ತಾನವನ್ನಾಗಿ ಮಾಡಲು ಬಯಸುವ ಕೆಲವು ಜನರ ಕುತಂತ್ರವನ್ನು ಎದುರಿಸಲು ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕೆಂದು ರಾಣಾ ಹೇಳಿದ್ದರು.
ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ. ಕೆಲವರು ನಾಲ್ಕು ಹೆಂಡತಿಯರು ಮತ್ತು 19 ಮಕ್ಕಳಿದ್ದಾರೆ ಎಂದು ಬಹಿರಂಗವಾಗಿ ಹೇಳುತ್ತಾರೆ. ನಾವು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು. ಅವರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಿಂದೂಸ್ತಾನ್ ಅನ್ನು ಪಾಕಿಸ್ತಾನವನ್ನಾಗಿ ಮಾಡಲು ಯೋಜಿಸುತ್ತಿದ್ದಾರೆ, ಹಾಗಾದರೆ ನಾವು ಕೇವಲ ಒಂದು ಮಗುವಿಗೆ ಏಕೆ ತೃಪ್ತರಾಗಬೇಕು ಎಂದು ಪ್ರಶ್ನಿಸಿದ್ದರು.
