ಉದಯವಾಹಿನಿ, ತಮಿಳುನಾಡು: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ್ದ ತಂದೆಗೆ ಪೋಕ್ಸೋ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಘಟನೆ ವಿವರ: ತಿರುನೆಲ್ವೇಲಿ ಜಿಲ್ಲೆಯ ಪಣಗುಡಿದ ದಿನಗೂಲಿ ಕೆಲಸಗಾರನಾಗಿರುವ ಅಪರಾಧಿಗೆ ಇಬ್ಬರು ಪತ್ನಿಯರಿದ್ದು, ಎರಡನೇ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ವರ್ಷದ ಜನವರಿಯಲ್ಲಿ ಬಾಲಕಿಯ ದೇಹದಲ್ಲಿ ಬದಲಾವಣೆ ಕಂಡು ಬಂದಿದೆ. ನಂತರ ಬಾಲಕಿಯ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದರು.
ಬಾಲಕಿ ಗರ್ಭಿಣಿಯಾಗಿರುವುದನ್ನು ತಿಳಿದು ಆಘಾತಕ್ಕೊಳಗಾದ ಆಕೆಯ ತಾಯಿ ಮತ್ತು ವೈದ್ಯರು ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ, ತಂದೆ 2024 ರಿಂದ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿಸಿದ್ದಳು. ಬಳಿಕ ಬಾಲಕಿಯ ತಾಯಿ ಕಳೆದ ವರ್ಷ ಫೆಬ್ರವರಿಯಲ್ಲಿ ವಲ್ಲಿಯೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.ಇದರ ನಡುವೆ ಗರ್ಭಿಣಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು. ಡಿಎನ್ಎ ಪರೀಕ್ಷೆಯಲ್ಲಿ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿರುವುದು ದೃಢಪಟ್ಟಿದೆ. ಈ ಪ್ರಕರಣದ ವಿಚಾರಣೆ ತಿರುನಲ್ವೇಲಿ ಪೋಕ್ಸೋ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ತಿರುನಲ್ವೇಲಿ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕುಮಾರ್ ಅವರು ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ತಂದೆಗೆ ಮರಣದಂಡನೆ ಮತ್ತು 25 ಸಾವಿರ ರೂ. ದಂಡ ವಿಧಿಸಿ, ಸಂತ್ರಸ್ತೆಗೆ ತಮಿಳುನಾಡು ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.
