ಉದಯವಾಹಿನಿ , ಲಂಡನ್: ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ದಾಳಿಯು ವಿಶ್ವದ ಹಲವು ದೇಶಗಳಲ್ಲಿ ಸಂಚಲನ ಮೂಡಿಸಿದೆ. ಅಮೆರಿಕದ ಹೈಡ್ರಾಮಗಳ ಕುರಿತು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೂ ಚರ್ಚೆ ನಡೆದಿದೆ. ಸಭೆಯಲ್ಲಿ ಪದಚ್ಯುತ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನ ತಕ್ಷಣವೇ ಬಿಡುಗಡೆ ಮಾಡುವಂತೆ ರಷ್ಯಾ ಮತ್ತು ಚೀನಾ ಒತ್ತಾಯಿಸಿವೆ.
ವಿಶ್ವಸಂಸ್ಥೆಯ ಸಭೆಯಲ್ಲಿ ರಷ್ಯಾ ರಾಯಭಾರಿ ವಾಸಿಲಿ ನೆಬೆಂಜಿಯಾ, ವೆನೆಜುವೆಲಾ ಮೇಲಿನ ಅಮೆರಿಕದ ಆಕ್ರಮಣವನ್ನ ತೀವ್ರವಾಗಿ ಖಂಡಿಸಿದ್ದಾರೆ. ಟ್ರಂಪ್, ಮಡುರೊ ಮತ್ತು ಅವರ ಪತ್ನಿಯನ್ನ ಕೂಡಲೇ ಬಿಡುಗಡೆ ಮಾಡಬೇಕು. ಅಮೆರಿಕದ ಅಪರಾಧಗಳಿಗೆ ಯಾವುದೇ ಸಮರ್ಥನೆಯಿಲ್ಲ. ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ, ಸಶಸ್ತ್ರ ದಾಳಿ ನಡೆಸಿದೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚೀನಾ ಕೂಡ, ಅಮೆರಿಕದ ದಾಳಿಯನ್ನ ಕಾನೂನು ಬಾಹಿರ ಎಂದು ಕರೆದಿದೆ. ಒಂದು ದೇಶದ ಮೇಲೆ ಬೆದರಿಕೆ ಹಾಕುವುದು ಆಘಾತಕಾರಿ ಬೆಳವಣಿಗೆ. ಅಮೆರಿಕ ತನ್ನ ನಿಲುವನ್ನ ಬದಲಿಸಬೇಕು. ಬೆದರಿಸುವ ಅಭ್ಯಾಸಗಳನ್ನ ಬಿಟ್ಟು, ಪರಸ್ಪರ, ಗೌರವ ಸಮಾನತೆಯಿಂದ ನಡೆದುಕೊಳ್ಳಬೇಕು. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನ ನಿಲ್ಲಿಸಬೇಕು. ಜೊತೆಗೆ ಮಡುರೋ ಮತ್ತು ಅವರ ಪತ್ನಿಯ ಬಿಡುಗಡೆ ಮಾಡಬೇಕು ಚೀನಾದ ವಿಶ್ವಸಂಸ್ಥೆ ಪ್ರತಿನಿಧಿ ಸನ್ ಲೀ ಒತ್ತಾಯಿಸಿದ್ದಾರೆ.
