ಉದಯವಾಹಿನಿ , ಕರ್ನಾಟಕ ತಂಡದ ದೇವದತ್ ಪಡಿಕ್ಕಲ್ ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರ ಬ್ಯಾಟಿಂಗ್ ಅದ್ಭುತವಾಗಿದ್ದು, ಈ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಶತಕಗಳ ಮೂಲಕ ರನ್ ಹೊಳೆ ಹರಿಸಿದ್ದಾರೆ. ಜನವರಿ 6 ರಂದು ಮಂಗಳವಾರ ಕರ್ನಾಟಕ ತಂಡ, ಅಹಮದಾಬಾದ್‌ನಲ್ಲಿ ರಾಜಸ್ಥಾನ ವಿರುದ್ಧ ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ ಪಡಿಕ್ಕಲ್, ಮತ್ತೆ 91 ರನ್ ಗಳಿಸಿದರು. ಅವರು ಶತಕ ಗಳಿಸಲು ವಿಫಲರಾದರೂ ಅವರು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
26ರ ವಯಸ್ಸಿನ ದೇವದತ್ ಪಡಿಕ್ಕಲ್ ಈ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ 605 ರನ್ ಗಳಿಸಿದ್ದಾರೆ. ಇದರೊಂದಿಗೆ, ಆರ್‌ಸಿಬಿ ಬ್ಯಾಟರ್ ಮೂರು ವಿಭಿನ್ನ ವಿಜಯ ಹಝಾರೆ ಟ್ರೋಫಿ ಋತುಗಳಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಈ ದಾಖಲೆಯನ್ನು ಬರೆದಿಲ್ಲ. 2019-20ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಪಡಿಕ್ಕಲ್ 11 ಪಂದ್ಯಗಳಲ್ಲಿ 609 ರನ್ ಗಳಿಸಿದ್ದರು ಮತ್ತು 2020-21ರ ಋತುವಿನಲ್ಲಿ 7 ಪಂದ್ಯಗಳಲ್ಲಿ 737 ರನ್ ಗಳಿಸಿದ್ದರು. ಆರ್‌ಸಿಬಿ ಆಟಗಾರ 2025-26ರ ವಿಜಯ ಹಝಾರೆ ಟ್ರೋಫಿ ಋತುವನ್ನು ಜಾರ್ಖಂಡ್ ವಿರುದ್ಧ 147 ರನ್‌ಗಳ ಇನಿಂಗ್ಸ್‌ನೊಂದಿಗೆ ಪ್ರಾರಂಭಿಸಿದ್ದರು. ನಂತರ ಅವರು ಕೇರಳ ವಿರುದ್ಧ 124 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಮಾತ್ರ ಪಡಿಕ್ಕಲ್ ಅರ್ಧಶತಕ ಅಥವಾ ಶತಕ ಗಳಿಸದೆ ಔಟಾದರು. ನಾಲ್ಕನೇ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಪುದುಚೇರಿ ವಿರುದ್ಧ 113 ಮತ್ತು ಐದನೇ ಪಂದ್ಯದಲ್ಲಿ ತ್ರಿಪುರ ವಿರುದ್ಧ 108 ರನ್ ಗಳಿಸಿದರು. ಇದೀಗ ಆರನೇ ಪಂದ್ಯದಲ್ಲಿ ಅವರು ರಾಜಸ್ಥಾನ ವಿರುದ್ಧ ಮತ್ತೊಂದು 91 ರನ್ ಗಳಿಸಿದ್ದಾರೆ.
