ಉದಯವಾಹಿನಿ , ಮುಂಬಯಿ,: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರು ಐರ್ಲೆಂಡ್‌ನ ಸೋಫಿ ಶೈನ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಕಳೆದ ವರ್ಷವೇ ಖಚಿತಪಡಿಸಿದ್ದರು. ಇದೀಗ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ. ಮೂಲಗಳ ಪ್ರಕಾರ, ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆಯಲಿದ್ದು, ಕ್ರಿಕೆಟ್ ಮತ್ತು ಬಾಲಿವುಡ್‌ನ ಸ್ಟಾರ್‌ಗಳು ಭಾಗವಹಿಸಲಿದ್ದಾರೆ. ವಿವಾಹ ಸಮಾರಂಭದ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ, ಆದರೂ ದಂಪತಿಗಳು ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಟ್ಟಿದ್ದಾರೆ.
ಧವನ್ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಶಾ ಮುಖರ್ಜಿ ಜತೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಪತ್ನಿಯ ಅತಿಯಾದ ಕಿರುಕುಳದಿಂದ ಬೇಸತ್ತು ಧವನ್ ಕೊನೆಗೆ ಕೋರ್ಟ್ ಮೊರೆ ಹೋಗಿ ವಿಚ್ಛೇದನ ಪಡೆದಿದ್ದರು. 2024 ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು.
ದುಬೈನಲ್ಲಿ ಆರಂಭವಾದ ಪ್ರಣಯ
ಐರ್ಲೆಂಡ್‌ನ ಸೋಫಿ ಶೈನ್ ಜತೆ ಧವನ್ ಕಳೆದೊಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದರು. ಅಲ್ಲದೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಶಿಖರ್ ಮತ್ತು ಸೋಫಿ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಅಲ್ಲಿ ಅವರ ಸ್ನೇಹ ಕ್ರಮೇಣ ಸಂಬಂಧವಾಗಿ ಬದಲಾಯಿತು. ಇಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ವಾಸಿಸುತ್ತಿದ್ದಾರೆ. ಧವನ್ ಜತೆಗೆ ಆತ್ಮೀಯವಾಗಿರುವ ಫೋಟೊಗಳನ್ನು ಕೂಡ ಸೋಫಿ ಶೈನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಚಿಕೊಳ್ಳುತ್ತಿದ್ದಾರೆ.
