ಉದಯವಾಹಿನಿ, ಬೀದರ್: ಅತಿವೇಗದ ಚಾಲನೆ, ಮದ್ಯಪಾನ ಸೇವಿಸಿ ವಾಹನ ಚಾಲನೆ, ಹಾಳಾದ ರಸ್ತೆ, ಅಜಾಗರೂಕತೆ, ತರಬೇತಿ ಕೊರತೆ ಕೊರತೆ ಸೇರಿ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ 800ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು, 263 ಮಂದಿ ಸಾವನ್ನಪ್ಪಿದ್ದಾರೆ.
ಬೀದರ್ ಜಿಲ್ಲೆಯ ವಿವಿಧೆಡೆ 2025ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ಅಂದರೆ 10 ತಿಂಗಳಲ್ಲಿ 818 ರಸ್ತೆ ಅಪಘಾತ ಸಂಭವಿಸಿವೆ. ಇದರಲ್ಲಿ 263 ಜನರು ಪ್ರಾಣ ಕಳೆದುಕೊಂಡಿದ್ದಾರೆ. 1,111 ಮಂದಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಫೆಬ್ರವರಿ ತಿಂಗಳಲ್ಲಿ ಬೀದರ್ ಕಡೆಯಿಂದ ಸಂತಪೂರ ಕಡೆಗೆ ಹೊರಟಿದ್ದ ಬೈಕ್ ಹಾಗೂ ಟೆಂಪೋ ಟ್ರಾವೆಲ್ಸ್ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ವೈದ್ಯರೊಬ್ಬರು ಘಟನಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದರು. ಇನ್ನು ಬಸವಕಲ್ಯಾಣ ತಾಲೂಕಿನ ಉಮಾಪುರ ಗ್ರಾಮದ ಬಳಿ ವೇಗವಾಗಿ ಬಂದ ಗೂಡ್ಸ್ ಗಾಡಿಯೊಂದು ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಇಬ್ಬರು ಸ್ಥಳದಲ್ಲೇ ಕೊನೆಯುರೆಳೆದಿದ್ದರು.

ಕಳೆದ ಆಗಸ್ಟ್‌ನಲ್ಲಿ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯ ಜನವಾಡ ಸಮೀಪ ಕಾರು-ಬೈಕ್ ಮಧ್ಯೆ ಸಿನಿಮೀಯ ರೀತಿಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದ. ಅತಿವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಸಿನಿಮೀಯ ರೀತಿಯಲ್ಲಿ ಬೈಕ್ ಮೇಲಿದ್ದ ಇಬ್ಬರು ಐದಾರು ಅಡಿ ದೂರ ಹಾರಿದರು. ಮತ್ತೋರ್ವ ಸವಾರ ಗಾಯಗೊಂಡಿದ್ದನು. ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ಭೀಕರ ದೃಶ್ಯ ಭಾರಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *

error: Content is protected !!