ಉದಯವಾಹಿನಿ, ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ಪೊಲೀಸ್ ದೌರ್ಜನ್ಯದ ಪರಾಕಾಷ್ಠೆ. ಗೃಹ ಸಚಿವ ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರೋ ಅವರು, ಇದೊಂದು ಅಮಾನವೀಯ ಘಟನೆ ಎಂದು ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾನವೀಯತೆ ಮಟಾಷ್, ಮಹಿಳಾ ಕಾರ್ಯಕರ್ತೆಯ ಮೇಲೆ ಪೊಲೀಸ್ ದೌರ್ಜನ್ಯದ ಪರಾಕಾಷ್ಠೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತ ಅವರ ಮೇಲೆ ನಡೆದಿದೆ ಎನ್ನಲಾದ ಅಮಾನವೀಯ ಕೃತ್ಯವು ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು. ಕಾಂಗ್ರೆಸ್ ಪಾಲಿಕೆ ಸದಸ್ಯೆಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಸುಜಾತ ಅವರನ್ನು ವಶಕ್ಕೆ ಪಡೆದ ಪೊಲೀಸರು, ಅವರು ಒಬ್ಬ ಮಹಿಳೆ ಎಂಬ ಕನಿಷ್ಠ ಗೌರವವನ್ನೂ ನೀಡದೆ ವಿವಸ್ತ್ರಗೊಳಿಸಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವುದು ಆಘಾತಕಾರಿಯಾಗಿದೆ. ಕಾನೂನು ಪಾಲಿಸಬೇಕಾದ ಪೊಲೀಸರೇ ಈ ಮಟ್ಟದ ದೌರ್ಜನ್ಯಕ್ಕೆ ಇಳಿದಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಕೇವಲ ರಾಜಕೀಯ ಪ್ರೇರಿತ ದೂರಿನ ಆಧಾರದ ಮೇಲೆ ಒಬ್ಬ ಮಹಿಳಾ ಕಾರ್ಯಕರ್ತೆಯ ವಿರುದ್ಧ ಇಂತಹ ಭೀಕರ ಕ್ರಮ ಕೈಗೊಂಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಹತ್ಯೆಯಾಗಿದೆ. ಆಡಳಿತ ಪಕ್ಷದ ಸದಸ್ಯರ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿರುವುದು ಮತ್ತು ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ ತರುತ್ತಿರುವುದು ಖಂಡನೀಯ.
