ಉದಯವಾಹಿನಿ, ಭೋಪಾಲ್: ಮಧ್ಯಪ್ರದೇಶದ ಗ್ರಾಮೀಣ ಭಾಗದ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್‌ನ ಹೊಸ ವರದಿ ಬಹಿರಂಗಪಡಿಸಿದೆ. ಗ್ರಾಮೀಣ ಭಾಗದಲ್ಲಿ ಕುಡಿಯಲು ಬಳಸಲಾಗುವ ನೀರಿನಲ್ಲಿ ಪ್ರತಿ ಮೂರನೇ ಗ್ಲಾಸ್ ನೀರು ಅಸುರಕ್ಷಿತವಾಗಿದೆ. ರಾಷ್ಟ್ರೀಯ ಶೇ. 76ರಷ್ಟು ನೀರಿನ ಸರಾಸರಿಗೆ ಹೋಲಿಸಿದರೆ ರಾಜ್ಯದ ಶೇ. 63.3ರಷ್ಟು ನೀರು ಮಾತ್ರ ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ. ಹೀಗಾಗಿ ಮಧ್ಯಪ್ರದೇಶದ ಹಳ್ಳಿಗಳಲ್ಲೂ ಕೂಡ ಕಲುಷಿತ ನೀರು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬಿರುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಮಧ್ಯಪ್ರದೇಶದ ಗ್ರಾಮೀಣ ಭಾಗದಲ್ಲಿ ಕಲುಷಿತ ನೀರು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಜಲ ಜೀವನ್ ಮಿಷನ್‌ನ ಹೊಸ ವರದಿಯಲ್ಲಿ ತಿಳಿಸಲಾಗಿದೆ. ರಾಜ್ಯದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದು ಸದ್ದಿಲ್ಲದೇ ಲಕ್ಷಾಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಜನವರಿ 4ರಂದು ಬಿಡುಗಡೆಯಾದ ವರದಿಯ ಪ್ರಕಾರ ಮಧ್ಯಪ್ರದೇಶದಲ್ಲಿ ಶೇ. 63.3ರಷ್ಟು ನೀರಿನ ಮಾದರಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿವೆ. ಅಂದರೆ ರಾಜ್ಯದಲ್ಲಿ ಶೇ. 36.7ರಷ್ಟು ಗ್ರಾಮೀಣ ಕುಡಿಯುವ ನೀರು ಅಸುರಕ್ಷಿತವಾಗಿವೆ. ಇದು ಬ್ಯಾಕ್ಟೀರಿಯಾ, ರಾಸಾಯನಿಕಗಳಿಂದ ಮಾಲಿನ್ಯಗೊಂಡಿದೆ.
2024ರ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಮಧ್ಯಪ್ರದೇಶದಾದ್ಯಂತ 15,000ಕ್ಕೂ ಹೆಚ್ಚು ಗ್ರಾಮೀಣ ಭಾಗದ ಮನೆಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಿದ ಮೇಲೆ ಈ ಫಲಿತಾಂಶ ಸಿಕ್ಕಿದೆ.ಇನ್ನು ಸರ್ಕಾರಿ ಆಸ್ಪತ್ರೆಗಳ ನೀರಿನ ಮಾದರಿಗಳಲ್ಲಿ ಕೇವಲ ಶೇ. 12ರಷ್ಟು ಮಾತ್ರ ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿವೆ. ಅಂದರೆ ಮಧ್ಯಪ್ರದೇಶದ ಸುಮಾರು ಶೇ. 88ರಷ್ಟು ಆಸ್ಪತ್ರೆಗಳ ನೀರುಗಳು ಅಸುರಕ್ಷಿತವಾಗಿವೆ. ಶಾಲೆಗಳಲ್ಲಿ ಶೇ. 26.7ರಷ್ಟು ನೀರು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ.
ಅನುಪ್ಪುರ್ ಮತ್ತು ದಿಂಡೋರಿಯಂತಹ ಬುಡಕಟ್ಟು ಪ್ರದೇಶಗಳ ನೀರಿನ ಮಾದರಿಯಲ್ಲಿ ಒಂದೇ ಒಂದು ಸುರಕ್ಷಿತವಾಗಿಲ್ಲ. ಬಾಲಘಾಟ್, ಬೇತುಲ್ ಮತ್ತು ಚಿಂದ್ವಾರದ ಶೇ. 50ಕ್ಕಿಂತಲೂ ಹೆಚ್ಚಿನ ನೀರಿನ ಮಾದರಿಗಳು ಕಲುಷಿತಗೊಂಡಿವೆ.
