ಉದಯವಾಹಿನಿ, ಮುಜಾಫರ್​ನಗರ: ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ (ಯುಪಿಎಸ್​ಸಿ) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 9ನೇ ರ‍್ಯಾಂಕ್​​ ಗಳಿಸುವ ಮೂಲಕ ಸಣ್ಣ ವ್ಯಾಪಾರಿಯೊಬ್ಬರ ಪುತ್ರಿ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.
ಕಠಿಣ ಪರೀಕ್ಷೆಯಲ್ಲಿ ಸಾಧನೆಗೈದ ಯುವತಿಯ ಹೆಸರು ಆಸ್ತಾ ಜೈನ್. ಇವರ ತಂದೆ ಅಜಯ್ ಕುಮಾರ್ ಜೈನ್ ಅವರು ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಬಳಿ ಮಿಠಾಯಿ ಅಂಗಡಿ ನಡೆಸುತ್ತಿದ್ದಾರೆ. ಅಜಯ್ ಕುಮಾರ್ ಜೈನ್ ಅವರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಇದ್ದಾನೆ. ಆಸ್ತಾ ಎರಡನೇ ಪುತ್ರಿ.
ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕಾಂಡ್ಲಾದಲ್ಲಿ ಪೂರ್ಣಗೊಳಿಸಿದ ಆಸ್ತಾ ಬಳಿಕ ಶಾಮ್ಲಿಯ ಸ್ಕಾಟಿಷ್ ಶಾಲೆಯಲ್ಲಿ ಪ್ರೌಢಶಾಲೆ ಮತ್ತು ಮಧ್ಯಂತರ ಶಿಕ್ಷಣವನ್ನು ಪಡೆದಿದ್ದಾರೆ. ಇಂಟರ್​ಮೀಡಿಯೇಟ್​ ಬಳಿಕ ನಾಗರಿಕ ಸೇವೆ ಕಡೆ ಒಲವು ಹೊಂದಿದ್ದ ಆಸ್ತಾ, ಈ ವಿಚಾರವನ್ನು ಕುಟುಂಬಕ್ಕೆ ಹೇಳಿದರು. ಕುಟುಂಬವು ಅವರಿಗೆ ಅನುಕೂಲವಾಗುವಂತೆ ದಹಲಿಯಲ್ಲಿ ಬಿಎ ಅಧ್ಯಯನಕ್ಕೆ ಕಳುಹಿಸಿತು. ಪದವಿ ಜೊತೆಗೆ ಆಸ್ತಾ ಯುಪಿಎಸ್​ಸಿ ಪರೀಕ್ಷೆಗೂ ಅಧ್ಯಯನ ನಡೆಸಿದ್ದರು.

ಯುಪಿಎಸ್​ಸಿ ತಯಾರಿಯಲ್ಲಿ ಹೆಚ್ಚಾಗಿ ಸ್ವಯಂ ಅಧ್ಯಯನ ಬಗ್ಗೆ ಒಲವು ಹೊಂದಿದ್ದ ಅವರು, ದೆಹಲಿಯಲ್ಲಿ ಕೆಲವು ತರಬೇತಿ ಮತ್ತು ಆನ್‌ಲೈನ್ ಮಾಹಿತಿಗಳನ್ನು ತಮ್ಮ ಓದಿಗೆ ಅನುಕೂಲವಾಗಿ ಪಡೆದರು. ಆದರೆ, ಸ್ವತಃ ಅಧ್ಯಯನಕ್ಕೆ ಒತ್ತು ನೀಡಿದರು. ಇದೀಗ ಆಸ್ತಾ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಮೊದಲ ಪ್ರಯತ್ನದಲ್ಲೇ IPS ಆಗಿದ್ದ ಆಸ್ತಾ: ತಮ್ಮ ಮೊದಲ ಪ್ರಯತ್ನದಲ್ಲಿ 131 ನೇ ರ‍್ಯಾಂಕ್ ಗಳಿಸಿದ ಅವರು, ಹೈದರಾಬಾದ್ ಕೇಡರ್‌ನಲ್ಲಿ ಭಾರತೀಯ ಪೊಲೀಸ್ ಸೇವೆಗೆ ತರಬೇತಿ ಪಡೆಯುತ್ತಿದ್ದರು. ಎರಡನೇ ಪ್ರಯತ್ನದಲ್ಲಿ ಅವರು 186 ನೇ ರ‍್ಯಾಂಕ್ ಗಳಿಸಿದರು. ಇದೀಗ ಮೂರನೇ ಪ್ರಯತ್ನದಲ್ಲಿ 9ನೇ ರ‍್ಯಾಂಕ್​​ ಪಡೆದಿದ್ದು, ಅವರ ಯಶಸ್ಸಿಗೆ ಇಡೀ ಪಟ್ಟಣ, ಸ್ಥಳೀಯರು ಮತ್ತು ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಮಗಳ ಸಾಧನೆಗೆ ತಂದೆ ಅಜಯ್​ ಮಾರುಕಟ್ಟೆಯಲ್ಲಿ ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಆಸ್ತಾ, 2019ರಲ್ಲಿ ಇಂಟರ್​ ಮೀಡಿಯೇಟ್​ ಪರೀಕ್ಷೆಯಲ್ಲಿ 500 ರಲ್ಲಿ 496 ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು ಎಂದು ಕುಟುಂಬ ತಿಳಿಸಿದೆ. ಕಳೆದ ವರ್ಷ ಮೇ 25 ರಂದು ನಡೆದ 2025ರ ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆಯಲ್ಲಿ ಒಟ್ಟು 5,76,793 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಯುಪಿಎಸ್​ಸಿ ತಿಳಿಸಿದೆ. ಇದರಲ್ಲಿ 14,161 ಅಭ್ಯರ್ಥಿಗಳು ಆಗಸ್ಟ್​ನಲ್ಲಿ ಮುಖ್ಯ ಪರೀಕ್ಷೆಯನ್ನು ಬರೆದಿದ್ದರು. ಈ ಪೈಕಿ 2,736 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಅರ್ಹತೆ ಪಡೆದಿದ್ದರು.

Leave a Reply

Your email address will not be published. Required fields are marked *

error: Content is protected !!