ಉದಯವಾಹಿನಿ, ಲಖನೌ: ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಲಖನೌ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದ ನಂತರ ಪೊಲೀಸರು ಕಾರ್‌ನಿಂದ ಮಾದಕ ದ್ರವ್ಯ ಮತ್ತು ಸಿರಿಂಜ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 2025ರ ಸೆಪ್ಟೆಂಬರ್‌ನಲ್ಲಿ ಬರೇಲಿ ಹಿಂಸಾಚಾರದ ಮಾಸ್ಟರ್ ಮೈಂಡ್ ಎಂದು ಹೇಳಲಾದ ಮೌಲಾನಾ ತೌಕೀರ್ ರಜಾನ ಪುತ್ರ ಫರ್ಮಾನ್ ರಜಾ ಖಾನ್‍ನನ್ನು ಬಂಧಿಸಲಾಗಿದೆ.
ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಚ್ಚಿಯಾನಿ ಖೇಡಾ ಗ್ರಾಮದ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಹುಂಡೈ ವೆರ್ನಾ ಕಾರನ್ನು ಚಲಾಯಿಸುತ್ತಿದ್ದ ಫರ್ಮಾನ್ ರಜಾ ಸೀತಾಪುರ ಡಿಪೋ ರಸ್ತೆ ಮಾರ್ಗದ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದ ಪರಿಣಾಮವಾಗಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಫರ್ಮಾನ್ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾನೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಫರ್ಮಾನ್ ಬರೇಲಿಯಿಂದ ಪ್ರಯಾಗ್‌ರಾಜ್ ಕಡೆಗೆ ಪ್ರಯಾಣಿಸುತ್ತಿದ್ದ. ಪ್ರಸ್ತುತ ಫತೇಘರ್ ಜೈಲಿನಲ್ಲಿರುವ ತನ್ನ ತಂದೆಯ ಜಾಮೀನು ವಿಚಾರಣೆಗೆ ಸಂಬಂಧಿಸಿದಂತೆ ವಕೀಲರನ್ನು ಭೇಟಿಯಾಗಲು ಹೊರಟಿದ್ದ. ಆದರೆ ಆತನ ಯೋಜನೆ ಕೊನೆಯ ಕ್ಷಣದಲ್ಲಿ ಬದಲಾಯಿತು. ಹೀಗಾಗಿ ಶಹಜಹಾನ್‌ಪುರದ ಮೂಲಕ ತಡರಾತ್ರಿ ಪ್ರಯಾಣ ಬೆಳೆಸಿದ್ದ.
ಪೊಲೀಸರು ಅಪಘಾತದ ಸ್ಥಳಕ್ಕೆ ತಲುಪಿದಾಗ ಫರ್ಮಾನ್‍ನ ಅಸಹಜ ನಡವಳಿಕೆ ಅನುಮಾನಕ್ಕೆ ಕಾರಣವಾಯಿತು. ಪರಿಶೀಲನೆಗಾಗಿ ಕಾರಿನ ಡಿಕ್ಕಿ ತೆರೆಯಲು ಕೇಳಿದಾಗ ನಿರಾಕರಿಸಿದ್ದ. ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಲು ಪ್ರಾರಂಭಿಸಿದ್ದ ಎಂದು ವರದಿಯಾಗಿದೆ. ಇದು ಹೆದ್ದಾರಿಯಲ್ಲಿ ಸ್ವಲ್ಪ ಸಮಯ ಗೊಂದಲಕ್ಕೆ ಕಾರಣವಾಯಿತು.
