ಉದಯವಾಹಿನಿ, ಮಹಾಸಮುಂದ್ (ಛತ್ತೀಸ್​ಗಢ): ಆರು ವರ್ಷಗಳ ಕಾಲ ಕ್ಯಾನ್ಸರ್​ ವಿರುದ್ಧ ಹೋರಾಟ ಮಾಡಿ, ಮೂರು ಉದ್ಯೋಗಗಳನ್ನು ತೊರೆದ ಸಂಜಯ್​ ದಹರಿಯಾ ಇದೀಗ ಯುಪಿಎಸ್​ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ತಮ್ಮ ಮೂರನೇ ಪ್ರಯತ್ನದಲ್ಲಿ 946ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಬೆಲ್ಟುಕ್ರಿಯ ರೈತನ ಮಗನಾಗಿರುವ 38ವರ್ಷದ ಸಂಜಯ್​ ಸಾಧನೆಗೆ ಕುಟುಂಬ ಮತ್ತು ಗ್ರಾಮಸ್ಥರು ಹೆಮ್ಮೆ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಯಿಂದ ತಮ್ಮ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದ ಸಂಜಯ್​, ಐದನೇ ತರಗತಿಯಲ್ಲಿ ಮಾನಾ (ರಾಯ್‌ಪುರ)ದ ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ಬಳಿಕ ಅವರ ಶಿಕ್ಷಣವು ಮಹತ್ವದ ತಿರುವು ಪಡೆದುಕೊಂಡಿತು.
ದಹರಿಯಾ ನಾಗರಿಕ ಸೇವೆಗಳ ಆಯ್ಕೆಯ ಮಾರ್ಗವನ್ನು ಆಯ್ದುಕೊಂಡಾಗ ಅವರ ಮಾರ್ಗವೂ ಸಾಕಷ್ಟು ವೃತ್ತಿಪರ ಮತ್ತು ವೈಯಕ್ತಿಕ ಅಡೆತಡೆಗಳ ಸವಾಲನ್ನು ಅನುಭವಿಸಿದರು.
2009ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಆರಂಭಿಸಿದ ಅವರು, ತಮ್ಮ ಹೆಚ್ಚಿನ ಗುರಿಗಳತ್ತ ಗಮನಹರಿಸಲು 2011ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ನಡುವೆ 2012ರಲ್ಲಿ ಅವರಿಗೆ ಲಾಲಾರಸ ಗ್ರಂಥಿಗಳಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಈ ಕ್ಯಾನ್ಸರ್​ಗಾಗಿ ಅವರು ಆರು ವರ್ಷಗಳ ಕಾಲ ಕಠಿಣ ಚಿಕಿತ್ಸೆ ಪಡೆದುಕೊಂಡರು.

ಕೊಂಚ ಮಟ್ಟಿಗಿನ ದೃಷ್ಟಿ ದೋಷದಿಂದ ಬಳಲುತ್ತಿರುವ ದಹರಿಯಾ ತಮ್ಮ ಈ ಕಷ್ಟಗಳಿಂದ ಕುಗ್ಗದೇ ನಾಗರಿಕ ಸೇವೆ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಈ ನಡುವೆ ರಾಯ್‌ಪುರದ ಬ್ಯಾಂಕ್ ಮತ್ತು ಮಹಾಸಮುಂದ್ ಅಂಚೆ ಕಚೇರಿಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದರು.

2022ರಿಂದ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ ಅವರು, ತಮ್ಮ ಈ ಗುರಿಯನ್ನು ಸಾಧಿಸಲು ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಇದೀಗ 2025ರ ಪರೀಕ್ಷೆಯಲ್ಲಿ ಮೂರನೇ ಪ್ರಯತ್ನದಲ್ಲಿ ಯಶಸ್ಸುಗಳಿಸಿದ್ದಾರೆ.ತಮ್ಮ ಈ ಯಶಸ್ಸಿನ ಕುರಿತು ಮಾತನಾಡಿರುವ ಅವರು, ನಾಗರಿಕ ಸೇವೆಗಳ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವ ಆಶಯ ನನಗಿದೆ. ನಾನು ಐಎಎಸ್ ಕೇಡರ್ ಅಥವಾ ಬೇರೆ ಸೇವೆಯನ್ನು ಪಡೆದರೂ, ಸಾರ್ವಜನಿಕ ಸೇವೆಗೆ ನನ್ನ ಬದ್ಧತೆ ದೃಢವಾಗಿದೆ. ಅನಾರೋಗ್ಯದ ಸಮಯದಲ್ಲಿ ಅವರ ಕುಟುಂಬ ಮತ್ತು ಮಾರ್ಗದರ್ಶಕರ ಅಚಲ ಬೆಂಬಲವು ಈ ಯಶಸ್ಸಿಗೆ ಮನ್ನಣೆ ನೀಡಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಸಂಜಯ್​ ಸಾಧನೆಗೆ ಮಹಾಸಮುಂದ್ ಕಲೆಕ್ಟರ್ ವಿನಯ್ ಕುಮಾರ್ ಲ್ಯಾಂಗೆ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ ವಿಜಯ್ ಕುಮಾರ್ ಲಹಾರೆ ಅಭಿನಂದಿಸಿದ್ದು, ಧೈರ್ಯ ಮತ್ತು ಪರಿಶ್ರಮಕ್ಕೆ ಅವರ ಸಾಧನೆ ಉದಾಹರಣೆಯಾಗಿದೆ ಎಂದು ಪ್ರಶಂಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!