ಉದಯವಾಹಿನಿ, ಗುರುಗ್ರಾಮ್: ಮಹಿಳೆಯೊಬ್ಬಳು ಗಂಟೆಗಳ ಕಾಲ ಕ್ಯಾಬ್ ನಲ್ಲಿ ಪ್ರಯಾಣಿಸಿ ಬಾಡಿಗೆ ಹಣ ನೀಡಲು ನಿರಾಕರಿಸಿದ್ದಲ್ಲದೇ, ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರ ನೀಡಲು ಪೊಲೀಸ್ ಠಾಣೆಗೆ ತೆರಳಿರುವು ಘಟನೆ ಗುರುಗ್ರಾಮ್ ನಲ್ಲಿ ಬೆಳಕಿಗೆ ಬಂದಿದೆ. ನುಹ್ ಜಿಲ್ಲೆಯ ಧಾನಾ ಗ್ರಾಮದ ನಿವಾಸಿಯಾದ ಜಿಯಾವುದ್ದೀನ್ ಸಂತ್ರಸ್ತ ಚಾಲಕನಾಗಿದ್ದಾನೆ.
ಕ್ಯಾಬ್ ಚಾಲಕ ಜಿಯಾವುದ್ದೀನ್ ನೀಡಿದ ದೂರಿನಲ್ಲಿ, ಜ್ಯೋತಿ ದಲಾಲ್ ಎಂಬ ಮಹಿಳಾ ಪ್ರಯಾಣಿಕಳು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕ್ಯಾಬ್ ಬುಕ್ ಮಾಡಿ ಮೊದಲು ಸೆಕ್ಟರ್ 31ಕ್ಕೆ ಕರೆದುಕೊಂಡು ಹೋಗಲು ಹೇಳಿದಳು, ನಂತರ ಬಸ್ ನಿಲ್ದಾಣಕ್ಕೆ, ಬಳಿಕ ಸೈಬರ್ ಸಿಟಿಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾಳೆ. ಬಳಿಕ “ಅವಳು ಹಣ ಕೇಳಿದಾಗ ನಾನು ₹700 ನೀಡಿದ್ದೇನೆ. ಅಷ್ಟೇ ಅಲ್ಲದೇ ವಿವಿಧ ಸ್ಥಳಗಳಲ್ಲಿ ಊಟ ಮತ್ತು ಪಾನೀಯ ಸೇವಿಸಿದ್ದು, ಅದರ ಎಲ್ಲಾ ಖರ್ಚನ್ನೂ ನಾನೇ ಪಾವತಿಸಿದ್ದೇನೆ. ಮಧ್ಯಾಹ್ನ ನಾನು ಬಾಡಿಗೆ ಹಣ ನೀಡಿ ರೈಡ್ ಎಂಡ್ ಮಾಡುವಂತೆ ಕೇಳಿದಾಗ, ಅವಳು ಕೋಪಗೊಂಡಳು,” ಎಂದು ಚಾಲಕ ತಿಳಿಸಿದ್ದಾನೆ.
ನಂತರ ಜ್ಯೋತಿ ದಲಾಲ್ ನನ್ನ ಮೇಲೆ ಕಳ್ಳತನ ಅಥವಾ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದಳು ಎಂದು ಚಾಲಕ ಆರೋಪಿಸಿದ್ದಾನೆ. ಬಳಿಕ ಆ ಮಹಿಳೆ ಸೆಕ್ಟರ್ 29ರ ಪೊಲೀಸ್ ಠಾಣೆಗೆ ಹೋಗಿ ಗಲಾಟೆ ಮಾಡಿದ್ದಾಳೆ ಎಂದು ಚಾಲಕ ಜಿಯಾವುದ್ದೀನ್ ತಿಳಿಸಿದ್ದಾನೆ.
