ಉದಯವಾಹಿನಿ, ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಗ್ರಾಮದ ಮುಖ್ಯಸ್ಥನ ಕೊಲೆ ಪ್ರಕರಣದ ಆರೋಪಿಯಾಗಿದ್ದ ದರೋಡೆಕೋರನೊಬ್ಬ ಮಂಗಳವಾರ ತರಣ್ ತರಣ್ ಜಿಲ್ಲೆಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ. ಕ್ರಿಮಿನಲ್ ಆರೋಪಿಗಳಾದ ಅಫ್ರಿದಿ ಮತ್ತು ಪ್ರಭಾ ದಸ್ಸುವಾಲ್ ಜೊತೆ ಕೆಲಸ ಮಾಡುತ್ತಿದ್ದ ದರೋಡೆಕೋರ ಹರ್ನೂರ್ ಸಿಂಗ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .
ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರೂ ಆಗಿದ್ದ ಸರ್ಪಂಚ್ ಝರ್ಮಲ್ ಸಿಂಗ್ ಅವರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಈತ ಒಬ್ಬನಾಗಿದ್ದ. ಭಾನುವಾರ ಅಮೃತಸರದಲ್ಲಿ ಆಯೋಜಿಸಲಾಗಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಗುಂಡು ಹಾರಿಸಿ ಝರ್ಮಲ್ ಹತ್ಯೆ ಮಾಡಲಾಗಿತ್ತು. ಅವರು ತರಣ್ ತರಣ್‌ನ ವಾಲ್ತೋವಾ ಗ್ರಾಮದ ನಿವಾಸಿಯಾಗಿದ್ದರು.
ಭಿಖಿವಿಂಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಆರೋಪಿ ಅಲ್ಲಿ ಇರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ತರಣ್ ತರಣ್ ಪೊಲೀಸರು ಮತ್ತು ಗ್ಯಾಂಗ್‌ಸ್ಟರ್ ವಿರೋಧಿ ಕಾರ್ಯಪಡೆ (ಎಜಿಟಿಎಫ್) ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದವು.
ಆರೋಪಿ ಸಿಂಗ್, ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ. ಈ ವೇಳೆ ಆತನನ್ನು ಬೆನ್ನಟ್ಟಲಾಯಿತು. ನಿಲ್ಲುವಂತೆ ಸೂಚಿಸಿದಾಗ, ಅವನು ಪೊಲೀಸ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿದಾಳಿಯಲ್ಲಿ, ಗುಂಡು ತಗುಲಿ ಆರೋಪಿ ಮೃತಪಟ್ಟಿದ್ದಾನೆ.ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ಸ್ನೇಹ್ ದೀಪ್ ಶರ್ಮಾ, ತರಣ್ ತರಣ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೇತೃತ್ವದ ತಂಡವು ವಿಶೇಷ ಕಾರ್ಯಾಚರಣೆಯನ್ನು ನಡೆಸಿತು ಎಂದು ಹೇಳಿದರು. ಪೊಲೀಸರು ತನ್ನನ್ನು ಸುತ್ತುವರೆದಿರುವುದನ್ನು ಕಂಡ ಆರೋಪಿ ಗುಂಡು ಹಾರಿಸಿದನು. ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಗುಂಡು ತಗುಲಿತು. ಆದರೆ ಗುಂಡು ನಿರೋಧಕ ಜಾಕೆಟ್ ಧರಿಸಿದ್ದರಿಂದ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಶರ್ಮಾ ಹೇಳಿದರು.ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿ ಹೇಳಿದರು. ಸ್ಥಳದಿಂದ ಒಂದು ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.
