ಉದಯವಾಹಿನಿ, 17 ವರ್ಷದ ಯುವಕನೊಬ್ಬ ತನ್ನ ತಾಯಿ ಮಾಡಿರುವ ಸಾಲವನ್ನು ತೀರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವು ನೆಟ್ಟಿಗರು ತಾಯಿ-ಮಗನ ಬಾಂಧವ್ಯಕ್ಕೆ ಫಿದಾ ಆಗಿದ್ದು, ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಹೌದು. ಅಮನ್ ದುಗ್ಗಲ್ ಎಂಬ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕ್ಲಿಪ್ ನಲ್ಲಿ, ತನ್ನ ತಾಯಿಗೆ ಸರ್ ಪ್ರೈಸ್ ನೀಡುವ ಮೂಲಕ ತನ್ನ ಪ್ರೀತಿ ಹಾಗೂ ಗೌರವವನ್ನು ವ್ಯಕ್ತಪಡಿಸಿದ್ದಾನೆ. ಸಾಲದಿಂದ ಮುಕ್ತಗೊಳಿಸುವ ಗಿಫ್ಟ್ ನೀಡುವ ಮೂಲಕ ತನ್ನ ತಾಯಿಯನ್ನು ಅಚ್ಚರಿಗೊಳಿಸಿದ್ದಾನೆ. ತನ್ನ ತಾಯಿಯನ್ನು ಪ್ರೀತಿಸುತ್ತಿರುವುದಾಗಿ ಮತ್ತು ಆಕೆ ಮಾಡಿದ ಸಾಲವನ್ನು ತೀರಿಸಲು ತಾನು ಸ್ವಲ್ಪ ನೆರವಾಗುವುದಾಗಿ ಹೇಳುವುದು ವಿಡಿಯೋದಲ್ಲಿದೆ.
ತನಗಾಗಿ ಆಕೆ ಮಾಡಿದ ಎಲ್ಲದಕ್ಕೂ ಧನ್ಯವಾದ ಹೇಳುತ್ತಾನೆ. ಆಕೆ ತನ್ನ ಜೀವನದ ಅತ್ಯಂತ ವಿಶೇಷ ಮಹಿಳೆ ಎಂದು ಕರೆಯುತ್ತಾನೆ. ಇದರಿಂದ ತಾಯಿಗೆ ಹೃದಯ ತುಂಬಿ ಬಂದಿದ್ದು, ತಾನೂ ಕೂಡಾ ಆತನನ್ನು ಹೆಚ್ಚಾಗಿ ಪ್ರೀತಿಸುವುದಾಗಿ ಹೇಳುತ್ತಾಳೆ. ಆದರೆ, ಆಕೆ ಯಾಕೆ ಅಳುತ್ತಾಳೆ ಎಂಬುದು ಅರ್ಥವಾಗುವುದಿಲ್ಲ. ನಂತರ ಅಮನ್ ಆಕೆಗೆ ಕಣ್ಣು ತೆರೆಯಲು ಹೇಳಿ ಹಣವನ್ನು ನೀಡುತ್ತಾನೆ. ಎಲ್ಲಾ ಸಾಲವನ್ನು ತೀರಿಸಲು ಈ ಹಣವನ್ನು ಈಗ ನೀಡುತ್ತಿದ್ದೇನೆ. ತಿಂಗಳ ಎಲ್ಲಾ ಖರ್ಚು ವೆಚ್ಚಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಈ ಮಾತು ಕೇಳಿದ ತಾಯಿ ಆನಂದ ಭಾಷ್ಪದಲ್ಲಿ ಆತನನ್ನು ತಬ್ಬಿಕೊಳ್ಳುತ್ತಾಳೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
