ಉದಯವಾಹಿನಿ , ಚಿಕ್ಕಮಗಳೂರು: ಕಾಫಿನಾಡಿನ ಸಹಕಾರ ಕ್ಷೇತ್ರದ ಡಿಸಿಸಿ ಬ್ಯಾಂಕ್ ಚುನಾವಣಾ ಅಖಾಡ ಇದೀಗ ಕಲರ್ ಫುಲ್ ಆಗಿದೆ. ಡಿಸಿಸಿ ಬ್ಯಾಂಕಿನ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಚುನಾವಣಾ ಅಖಾಡಕ್ಕೆ ಘಟಾನುಘಟಿ ನಾಯಕರೇ ಪ್ರವೇಶ ಮಾಡುತ್ತಿದ್ದು, ದಿನದಿಂದ ದಿನಕ್ಕೆ ಚುನಾವಣಾ ಕಾವು ಬಿಸಿಯಾಗುತ್ತಿದೆ. ಪ್ರಮುಖವಾಗಿ ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಕಣದಲ್ಲಿ ಸಂಚಲನ ಮೂಡಿಸಿದ್ದಾರೆ. ಮಾಜಿ ಮತ್ತು ಹಾಲಿ ಶಾಸಕರುಗಳೇ ನೇರವಾಗಿ ಅಖಾಡಕ್ಕೆ ಇಳಿದಿರುವುದು ಈ ಬಾರಿಯ ಚುನಾವಣೆಯನ್ನು ಜಿಲ್ಲಾ ರಾಜಕಾರಣದ ಪ್ರತಿಷ್ಠೆಯ ಕಣವನ್ನಾಗಿಸಿದೆ.
ಒಟ್ಟು 13 ನಿರ್ದೇಶಕರ ಸ್ಥಾನಗಳಿಗೆ ನಡೆಯಲಿರುವ ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಆಶ್ಚರ್ಯಕರ ಸಂಗತಿಯಂದರೆ ಬಿಜೆಪಿಯ ಬಲಿಷ್ಠ ನಾಯಕರೇ ಅಖಾಡಕ್ಕೆ ಇಳಿದಿದ್ದರೂ ಕೂಡ ಐದಕ್ಕೆ ಐದೂ ಕಾಂಗ್ರೆಸ್ ಶಾಸಕರಿರೋ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಈವರೆಗೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ.
