ಉದಯವಾಹಿನಿ, ಹಾಸನ: ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಸಕಲೇಶಪುರದ ಎತ್ತಿನಹೊಳೆ ಯೋಜನೆ ಮುಖ್ಯ ಕಚೇರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. 2024 ರಲ್ಲಿ ಸುಮಾರು 1.5 ಟಿಎಂಸಿ ನೀರು ಎತ್ತಿನಹೊಳೆಯಿಂದ ಹರಿದಿದ್ದು ಇದಕ್ಕಾಗಿ 14 ಮೆಗವ್ಯಾಟ್ ವಿದ್ಯುತ್ ಬಳಕೆ ಮಾಡಲಾಗಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ಜಲ ನಿಗಮ ಅಂದಾಜು 52 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಬೇಕಿದೆ. 2025 ರಲ್ಲಿ ಎತ್ತಿನಹೊಳೆಯಿಂದ ಹೇಮಾವತಿ ನದಿಗೆ ಸುಮಾರು 2 ಟಿಎಂಸಿ ಹಾಗೂ ಇತರೆ ಕೆರೆಗಳಿಗೆ 0.3 ಟಿಎಂಸಿ ನೀರು ಹರಿಸಲಾಗಿದ್ದು ಇದಕ್ಕಾಗಿ ಒಟ್ಟು 18.25 ಮೆಗವ್ಯಾಟ್ ವಿದ್ಯುತ್ ಬಳಕೆ ಮಾಡಿಕೊಳ್ಳಲಾಗಿದೆ. ಒಟ್ಟು 223 ಕೋಟಿ ರೂ. ವಿದ್ಯುತ್ ಬಿಲ್‍ನ್ನು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ.
ಪ್ರತಿ ತಿಂಗಳು 9 ರಿಂದ 10 ಕೋಟಿ ರೂ. ಕನಿಷ್ಠ ವಿದ್ಯುತ್ ಬಿಲ್ ಪಾವತಿ ಮಾಡಬೇಕಿರುವ ವಿಶ್ವೇಶ್ವರಯ್ಯ ಜಲ ನಿಗಮ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಹಿನ್ನಲೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಹಣ ಪಾವತಿಸದ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯುತ್ ಸಂಪರ್ಕ ಕಡಿತದಿಂದ ಕಚೇರಿಯ ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದ್ದು, ಕಂಪ್ಯೂಟರ್‌ಗಳು, ಆನ್‍ಲೈನ್ ವರದಿ ಸಲ್ಲಿಕೆ, ಅಧಿಕಾರಿಗಳ ಸಭೆ, ಸೇರಿದಂತೆ ಆಡಳಿತಾತ್ಮಕ ಕಾರ್ಯಗಳಿಗೆ ಜನರೇಟರ್ ಬಳಸಲಾಗುತ್ತಿದೆ.
