ಉದಯವಾಹಿನಿ, ಮಡಿಕೇರಿ: ಬಡಜನರು ಅರಣ್ಯದಂಚಿನ ಪ್ರದೇಶಗಳಲ್ಲಿ ಸಣ್ಣ ಸೂರು ಕಟ್ಟಿದ್ರೂ ಅಧಿಕಾರಿಗಳು ನೆಲಸಮ ಮಾಡಿಬಿಡ್ತಾರೆ. ಆದ್ರೆ ಪ್ರಭಾವಿಗಳು ತಮ್ಮಿಷ್ಟದಂತೆ ಫಾರ್ಮ್‌ಹೌಸ್ ಕಟ್ಟಿದ್ದರೂ ಕಣ್ಣಿದ್ದೂ ಕುರುಡರಾಗ್ತಾರೆ. ವಸತಿ ಸಚಿವರ ವೈಯಕ್ತಿಕ ಕಾರ್ಯದರ್ಶಿ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿರೋದೇ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಹೌದು. ವಸತಿ ಸಚಿವರ ಪಿಎಸ್ (ವೈಯಕ್ತಿಕ ಕಾರ್ಯದರ್ಶಿ) ಸರ್ಫರಾಜ್ ಖಾನ್ ಅವರು ನಿರ್ಮಿಸಿರುವ ಐಷಾರಾಮಿ ರೆಸಾರ್ಟ್‌ಗೆ ಯಾವುದೇ ಇಲಾಖೆಯ ಅನುಮತಿ ಪಡೆದಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ವಣಚಲಿನಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ.
ಅರಣ್ಯಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಮಾಡಬೇಕಿದ್ದರೆ, ಭೂಮಿಯನ್ನ ಮೊದಲು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಬೇಕು. ಅದಕ್ಕೂ ಮುನ್ನ ಪಂಚಾಯ್ತಿ, ಪಂಚಾಯಿತಿ, ಅರಣ್ಯ, ಪರಿಸರ ಮಾಲಿನ್ಯ ಹಾಗೂ ಕಂದಾಯ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಭೂ ಪರಿವರ್ತನೆಯೇ ಮಾಡದೇ, ಯಾವುದೇ ಇಲಾಖೆಗಳ ಅನುಮತಿಯನ್ನೂ ಪಡೆಯದೇ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೊಡಗಿನ ಜನರು ಸಚಿವರ ಪಿಎಸ್ ಸರ್ಫರಾಜ್ ಖಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
