
ಉದಯವಾಹಿನಿ ಬೆಂಗಳೂರು, : ಕರ್ನಾಟಕದಲ್ಲಿ ಮಳೆ ಕೊರತೆ ಉಂಟಾಗಿದ್ದು, ನಾಡಿನ ಜಲಾಶಯಗಳು ಬರಿದಾಗುತ್ತಿವೆ. ಆದರೆ, ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ 72 ಗಂಟೆಗಳಲ್ಲಿ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಈ ಮಳೆಯು ಸ್ಪಲ್ಪ ಮಟ್ಟಿಗಿನ ಮಳೆ ಕೊರತೆಯನ್ನು ತಗ್ಗಿಸುತ್ತದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.ಆದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ತಿಂಗಳ ಮಳೆ ಕೊರತೆಯು ಶೇ 18ರಷ್ಟಿದೆ ಎಂದು ತಿಳಿದುಬಂದಿದೆ. ಬೀದರ್, ಬೆಳಗಾವಿ, ಕಲಬುರಗಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ವಾರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಜ್ಞರು ಭವಿಷ್ಯ ನುಡಿದಿದ್ದಾರೆ.ಕರಾವಳಿ ಕರ್ನಾಟಕ, ಘಟ್ಟ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಆದರೆ, ಕಾವೇರಿ ನದಿಯ ಜಲಾನಯನ ಪ್ರದೇಶವು ತೀವ್ರ ಮಳೆ ಕೊರತೆಯನ್ನು ಎದುರಿಸುತ್ತಿದೆ, ಅದರಲ್ಲೂ ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ‘ಮಳೆ ಕೊರತೆ ತೀವ್ರವಾಗಿದೆ. ಒಟ್ಟಾರೆ ಕರ್ನಾಟಕಕ್ಕೆ ಕೊರತೆಯು ಶೇ 18 ರಷ್ಟಿದೆ. ಅಂದರೆ, ಜುಲೈ ವೇಳೆಗೆ ಕರ್ನಾಟಕವು ಸುಮಾರು 70 ಪ್ರತಿಶತ ಮಳೆ ಪಡೆದಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಕೊಡಗು ಜಿಲ್ಲೆಯು ಕಾವೇರಿ ಜಲಾನಯನ ಪ್ರದೇಶಕ್ಕೆ ನೀರಿನ ಕೊಡುಗೆ ನೀಡುತ್ತದೆ. ಆದರೆ ಕೊರತೆಯು ಆತಂಕಕ್ಕೆ ಕಾರಣವಾಗಿದೆ. ‘ಕೊಡಗಿನಲ್ಲಿ ಮಳೆಯಾಗುತ್ತಿಲ್ಲ. ಇದು ಕಾವೇರಿ ನದಿಯ ಮೂಲವಾಗಿದೆ. ಇಲ್ಲಿ 55 ರಷ್ಟು ಕಡಿಮೆ ಮಳೆಯಾಗಿದೆ’ ಎಂದು ಐಎಂಡಿ ವಿಜ್ಞಾನಿ ಹೇಳಿದ್ದಾರೆ.ಕರಾವಳಿ ಕರ್ನಾಟಕವು ಶೇ 12 ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದೆ. ಉತ್ತರ ಒಳಭಾಗದಲ್ಲಿ ಶೇ 7 ಮತ್ತು ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಶೇ 29 ರಷ್ಟು ಕೊರತೆಯಿದೆ.ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮಧ್ಯಪ್ರವೇಶದ ಹೊರತಾಗಿಯೂ ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ. ಈ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕ ಕೂಡಲೇ ನೀರು ಬಿಟ್ಟರೆ ಮಾತ್ರ ಬೆಳೆದು ನಿಂತಿರುವ ಕುರುವಾಯಿ (ಅಲ್ಪಾವಧಿ ಭತ್ತ) ಬೆಳೆಯನ್ನು ಉಳಿಸಬಹುದು ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
