ಉಯವಾಹಿನಿ,: ಸಾಮಾಜಿಕ ಮಾಧ್ಯಮ ಹೆಚ್ಚಾಗಿ ಯುವ ದಂಪತಿ ಕಡಲತೀರಗಳು ಮತ್ತು ಸೂರ್ಯಾಸ್ತಗಳನ್ನು ಆನಂದಿಸುವ ಆಕರ್ಷಕ ಪ್ರಯಾಣದ ವಿಡಿಯೊಗಳಿಂದ ತುಂಬಿರುತ್ತದೆ. ಆದರೆ ಇತ್ತೀಚಿನ ವೈರಲ್ ವಿಡಿಯೊವೊಂದು ಇದಕ್ಕಿಂತ ವಿಭಿನ್ನ ಕಾರಣಕ್ಕಾಗಿ ಹೃದಯಗಳನ್ನು ಗೆದ್ದಿದೆ. ವೃದ್ಧ ದಂಪತಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಸಮುದ್ರ ತೀರದಲ್ಲಿ ನಡೆಯುತ್ತ ಆ ಕ್ಷಣವನ್ನು ಮನಸಾರೆ ಆನಂದಿಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ದಿವ್ಯಾ ತಾವ್ಡೆ ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ʼʼಶಾಂತವಾದ ಕಡಲತೀರಕ್ಕೆ ಭೇಟಿ ನೀಡುವ ವೇಳೆ ನನ್ನ ಅಜ್ಜ-ಅಜ್ಜಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಆ ಹೃದಯಸ್ಪರ್ಶಿ ಕ್ಷಣವು ನಾಟಕೀಯವಾಗಿಲ್ಲ. ಈ ದೃಶ್ಯವನ್ನು ವರ್ಣಿಸಲು ಪದಗಳಿಲ್ಲʼʼ ಎಂದಿದ್ದಾರೆ. ವಿಡಿಯೊವು ವೃದ್ಧ ದಂಪತಿ ಕೈಕೈ ಹಿಡಿದು ಸಮುದ್ರದಲ್ಲಿ ನಿಂತುಕೊಂಡಿದ್ದು, ತಮ್ಮ ಪಾದಗಳ ಮೇಲೆ ಅಲೆಗಳು ಅಪ್ಪಳಿಸುತ್ತಿರುವುದನ್ನು ತೋರಿಸುತ್ತದೆ. ಆ ಭಾವನೆ ತುಂಬಾ ಹೊಸದಾಗಿದ್ದರಿಂದ ಅಜ್ಜಿಯು ಪತಿಯ ಕೈಯನ್ನು ಹಿಡಿದಿದ್ದಾಳೆ. ದಂಪತಿ ಸಾಂಪ್ರದಾಯಿಕ ಮಹಾರಾಷ್ಟ್ರದ ಉಡುಗೆ ತೊಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಳ್ಳುತ್ತ ರಜಾದಿನದಂದು ಸಮುದ್ರ ವೀಕ್ಷಿಸಲು ತೆರಳಿದ್ದಲ್ಲ ಎಂದು ವಿವರಿಸಲಾಗಿದೆ. ದಶಕಗಳಿಂದ ಅವರು ಕಿವಿಗಳಿಂದಷ್ಟೇ ಕೇಳಿದ್ದ ಸಮುದ್ರವನ್ನು ಸ್ವತಃ ನೋಡಲು ತೆರಳಿದ್ದರು. ಅಲೆಗಳು ಅವರ ಪಾದಗಳನ್ನು ಮುಟ್ಟುತ್ತಿದ್ದಂತೆ ದಂಪತಿ ನಿಧಾನವಾಗಿ ಸಮುದ್ರದ ನೀರಿನೊಳಗೆ ಹೆಜ್ಜೆ ಹಾಕುವುದನ್ನು ವಿಡಿಯೊದಲ್ಲಿ ನೋಡಬಹುದು. ಕಿತ್ತಳೆ ಬಣ್ಣದ ಸೀರೆ ಮತ್ತು ಬಿಳಿ ಧೋತಿಯನ್ನು ಧರಿಸಿರುವ ಅವರು ತೃಪ್ತಿಯಿಂದ ಕಾಣುತ್ತಾರೆ. ಅವರ ಸಂತೋಷವು ಬಹಳ ಸೂಕ್ಷ್ಮವಾಗಿದೆ.
