ಉದಯವಾಹಿನಿ, ಬೆಂಗಳೂರು: ಬೆಲೆ ಏರಿಕೆಯ ನಡುವೆ ರಾಜ್ಯ ಸರ್ಕಾರ ಸರಕು ಸಾಗಾಣಿಕೆ ಹಾಗೂ ವಾಣಿಜ್ಯ ಬಳಕೆಯ ವಾಹನಗಳ ಪೂರ್ಣಾವಧಿ ತೆರಿಗೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ನಾಳೆಯಿಂದಲೇ ಜಾರಿಗೊಳ್ಳುತ್ತಿದೆ. ಇತ್ತೀಚೆಗೆ ಮುಕ್ತಾಯವಾದ ವಿಧಾನಮಂಡಲ ಅವೇಶನದಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ನಿರ್ಧರಣೆ ವಿಧೇಯಕ ಅಂಗೀಕಾರಗೊಂಡಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಂಡಿಸಿದ ಈ ಮಸೂದೆ ಹೆಚ್ಚಿನ ಚರ್ಚೆಗೊಳಗಾಗದೆ ಅನುಮೋದನೆಗೊಂಡಿದೆ ಹಾಗೂ ನಾಳೆಯಿಂದಲೇ ಜಾರಿಗೆ ಬರುತ್ತಿದ್ದು, ಮತ್ತಷ್ಟು ದರ ಏರಿಕೆಗೆ ಕಾರಣವಾಗುವ ಆತಂಕ ಸೃಷ್ಟಿಯಾಗಿದೆ.
ಕಾಯ್ದೆಯಲ್ಲಿ ನಮೂದಿಸಿದ ಪಟ್ಟಿಯ ಪ್ರಕಾರ ಹೊಸ ವಾಹನ ನೋಂದಣಿ, ಹಳೆ ವಾಹನಗಳ ಪರಭಾರೆಯಲ್ಲಿ ಈ ತೆರಿಗೆ ಅನ್ವಯವಾಗಲಿದೆ. ಹೊಸ ನೋಂದಣಿಗೆ ಒಂದೂವರೆಯಿಂದ ಎರಡು ಟನ್ ತೂಕದ ವಾಹನಗಳಿಗೆ ಹತ್ತು ಸಾವಿರ ರೂ. ತೆರಿಗೆಯು 20 ಸಾವಿರ ರೂ.ಗೆ ಏರಿಕೆಯಾಗುತ್ತಿದೆ.2ರಿಂದ 3 ಟನ್ ವಾಹನಗಳಿಗೆ 15ರಿಂದ 30 ಸಾವಿರ, 3ರಿಂದ 5.5 ಟನ್ ವಾಹನಗಳಿಗೆ 40 ಸಾವಿರ, 5.5ರಿಂದ 7.5 ಟನ್ ವಾಹನಗಳಿಗೆ 30ರಿಂದ 60 ಸಾವಿರ, 7.5 ಟನ್‍ನಿಂದ 9.5 ಟನ್‍ಗೆ 40ರಿಂದ 80 ಸಾವಿರ, 9.5ರಿಂದ 12 ಟನ್ ಮೀರಿದ ವಾಹನಗಳಿಗೆ 50ರಿಂದ ಒಂದು ಲಕ್ಷ ರೂ. ಪೂರ್ಣಾವಧಿ ತೆರಿಗೆ ಪರಿಷ್ಕರಣೆಯಾಗುತ್ತಿದೆ.ತೆರಿಗೆಯ ಮೊತ್ತ ದ್ವಿಗುಣಗೊಂಡಿದ್ದು, 2 ವರ್ಷ ಮೀರಿದ ವಾಹನಗಳಿಗೆ 18,600 ರೂ.ನಿಂದ 93 ಸಾವಿರ ರೂ.ವರೆಗೆ ಪರಿಷ್ಕರಣೆಯಾಗಲಿದೆ.
